ಹೈಕಮಾಂಡ್‌ ತೀರ್ಮಾನ ಅಂತಿಮ:ತನ್ವೀರ್ ಸೇಠ್

ಮೈಸೂರು: ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ,ಅದೇ ಅಂತಿಮ,ಅದಕ್ಕೆ ನಾವೆಲ್ಲ‌ ಬದ್ದರಾಗಿರುತ್ತೇವೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ತನ್ವೀರ್‌ ಸೇಠ್‌ ಅವರು, ರಾಜ್ಯದ ಜನ ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ, ನಮ್ಮ ಸರ್ಕಾರ ಈಗ ಎರಡೂವರೆ ವರ್ಷ ಪೂರೈಸಿದೆ. ಎಲ್ಲದಕ್ಕೂ ವರಿಷ್ಠರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿದರು.

ಅಧಿಕಾರ‌ ಹಂಚಿಕೆ‌ ಸೂತ್ರ ನಮಗೆ ಗೊತ್ತಿಲ್ಲ, ನಾನು ಯಾವ ಬಣದಲ್ಲೂ ಇಲ್ಲ, ನಾವು ನಾಯಕರ ಪೂಜೆ, ಆರಾಧನೆ ಮಾಡುವುದಿಲ್ಲ. ಕೇವಲ ರಾಜಕಾರಣ ಮಾಡಲು ಪಕ್ಷದಲ್ಲಿಲ್ಲ. ಡಿ.ಕೆ ಸುರೇಶ್, ರಾಜಣ್ಣ ಅವರ ಹೇಳಿಕೆಗೆ ವೈಯ್ಯಕ್ತಿಕ ಸ್ವಾತಂತ್ರ್ಯವಿದೆ. ಡಿಕೆಶಿ ಋಣ ನನ್ನ ಮೇಲೆ ಇದ್ದೆ ಇದೆ. ಈ ಹಿಂದೆ ನನ್ನ ತಂದೆ ತೀರಿ ಹೋದ ಸಮಯದಲ್ಲಿ ಉಪಚುನಾವಣೆ ಬಂತು.ಲೋಕಸಭಾ ಸೋತಿದ್ರೂ ಡಿಕೆಶಿ ನನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ರು. ನಾನು ಅದನ್ನು ಮರೆಯುವುದಿಲ್ಲ. ನಾನು ಪಕ್ಷೇತರವಾಗಿ ನಗರ ಪಾಲಿಕೆಗೆ ಆಯ್ಕೆಯಾಗಿದ್ದೆ. ಆ ಸಮಯದಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದರು. ನನ್ನನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಆದ್ರೆ ನಾನು ಮೇಯರ್ ಆಗಲಿಲ್ಲ. ಅದು ಬೇರೆ ವಿಚಾರ. ಸಿದ್ದರಾಮಯ್ಯ ಋಣ ಕೂಡ ನನ್ನ ಮೇಲಿದೆ ಎಂದು ಸ್ಮರಿಸಿದರು.

ಬದಲಾವಣೆ ಬಗ್ಗೆ ಏನು ಮಾತನಾಡಬೇಡಿ ಎಂದು ಹೈಕಮಾಂಡ್ ಹೇಳಿದೆ, ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನನ್ನ ಬೆಂಬಲವಿದೆ. ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದ್ರು ನಾನು ಬೆಂಬಲಿಸುತ್ತೇನೆ. ಪಕ್ಷದ ಪರ ನಾನು ನಿಲ್ಲುತ್ತೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.