ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತಕ್ಕೆ ಬಂದಿವೆ,ಆದ್ದರಿಂದ ಇವುಗಳ ಉಳಿವಿಗೆ ಆಸಕ್ತಿ ವಹಿಸಿ ಹೆಚ್ಚಿನ ಅನುದಾನ ಒದಗಿಸಬೇಕೆಂದು ಮಾಜಿ ಮೇಯರ್ ಶಿವಕುಮಾರ್ ಆಗ್ರಹಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮೈಸೂರು ಪಾರಂಪರಿಕ ನಗರ, ಸ್ವಚ್ಛ ನಗರಿ, ಯೋಗ ನಗರ ಅಂತ ಹಲವು ಬಿರುದುಗಳನ್ನು ಹೊಂದಿದೆ, ನಮ್ಮ ಮಹಾರಾಜರು ಕೊಟ್ಟಂತಹ ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತಕ್ಕೆ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇತಿಹಾಸವನ್ನ ಸಾರುವ ಎಷ್ಟೋ ಕಟ್ಟಡಗಳು ಅಳಿವಿನ ಹಂಚಿಗೆ ತಲುಪಿವೆ,ಮೈಸೂರಿನಲ್ಲಿ ಸುಮಾರು 234 ಪಾರಂಪರಿಕ ಕಟ್ಟಡಗಳಿವೆ, ಅದರಲ್ಲಿ ಅಧಿಕೃತವಾಗಿ 129 ಪಾರಂಪರಿಕ ಕಟ್ಟಡಗಳು ಎಂದು ಸರ್ಕಾರ ಘೋಷಣೆ ಮಾಡಿದೆ. ಮೈಸೂರಿನ ಮಹಾರಾಜ ಕಾಲೇಜು 179 ವರ್ಷಗಳ ಹಳೇ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಮಹಾರಾಜ ಕಾಲೇಜಿನಲ್ಲಿ ಕುವೆಂಪು, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ಎಸ್ ಎಂ ಕೃಷ್ಣ ಸೇರಿದಂತೆ ಹಲವಾರು ಮಹಾನ್ ವ್ಯಕ್ತಿಗಳು ವ್ಯಾಸಂಗ ಮಾಡಿದ ಇತಿಹಾಸ ಹೊಂದಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಓದಿದ ಯುವರಾಜ ಕಾಲೇಜು ಕೂಡ ಶಿಥಿಲವಾಗಿದೆ, ನಗರದ ಸಂಸ್ಕ್ರತ ಪಾಠ ಶಾಲೆ 150 ವರ್ಷಗಳ ಇತಿಹಾಸ ಹೊಂದಿದೆ. ಪ್ರಾಚ್ಯ ವಸ್ತು ಸಂಗ್ರಹಾಲಯವೂ ಕೂಡ ಶಿಥಿಲವಾಗಿದೆ. ಅಲ್ಲಿ 46 ಸಾವಿರಕ್ಕೂ ಹೆಚ್ಚು ತಾಳೆಗರಿ ಶಾಸನಗಳನ್ನ ಸಂರಕ್ಷಿಸಲಾಗಿದೆ.
ವಾಣಿ ವಿಲಾಸ ರಸ್ತೆಯಲ್ಲಿರುವ ಚಿಕ್ಕ ಅರಮನೆ ಕೂಡ ಶಿಥಿಲವಾಗಿದೆ. ಅಲ್ಲಿ ಸಮಾಜ ಕಲ್ಯಾಣದ ಹಾಸ್ಟೆಲ್ ನಡೆಸುತ್ತಿದ್ದಾರೆ. ಅದು ಯಾವುದೇ ಸಂದರ್ಭದಲ್ಲಿ ಬೀಳಬಹುದು.
ಜೊತೆಗೆ ಕೆ.ಆರ್ ಸರ್ಕಲ್ ಸೆಲ್ಲಾರ್ ಸಹ ದುಸ್ಥಿತಿಯಲ್ಲಿದೆ ಎಂದು ಶಿವಕುಮಾರ್ ವಿವರಿಸಿದರು.
ಹಾಗೆಯೇ ದೊಡ್ಡಗಡಿಯಾರ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ, ಮೈಸೂರಿನ ಹಲವೆಡೆ ಕಮಾನುಗಳಿವೆ. ಅವು ಕೂಡ ಬೀಳುವ ಪರಿಸ್ಥಿತಿಯಲ್ಲಿವೆ. ನಾನು ಮೇಯರ್ ಆಗಿದ್ದ ಸಂದರ್ಭದಲ್ಲಿ ಅವುಗಳ ದುರಸ್ತಿಗೆ 2.80 ಕೋಟಿ ಹಣ ಮೀಸಲಿಟ್ಟಿದ್ದೆ. ನಮ್ಮ ಅವಧಿ ಮುಗಿದ ಮೇಲೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಅವರು ಆರೋಪಿಸಿದರು.
ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಅವುಗಳ ದುರಸ್ತಿ ಮಾಡುವ ನಿಟ್ಟಿನಲ್ಲಿ ಆಸಕ್ತಿ ವಹಿಸುತ್ತಿಲ್ಲ. ಸ್ವತಃ ಸಿಎಂ ಸಿದ್ದರಾಮಯ್ಯನವರು ಇದರ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಮಾಜಿ ಮೇಯರ್ ಆಗ್ರಹಿಸಿದರು.
ಪಾರಂಪರಿಕ ಕಟ್ಟಡಗಳನ್ನ ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.