ಮುಧೋಳ: ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಗಳನ್ನು ಕಸದ ಬುಟ್ಟಿಯಲ್ಲಿ ಹಾಕಲಾಗಿದೆ.
ವಿಷಯ ಹರಡುತ್ತಿದ್ದಂತೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಹೊರಭಾಗದಲ್ಲಿ ಕಸದ ಬುಟ್ಟಿಯನ್ನು ಇರಿಸಲಾಗಿದೆ, ಅದರ ಪಕ್ಕದಲ್ಲೇ ರದ್ದಿ ತುಂಬಿದ ರಟ್ಟಿನ ಡಬ್ಬ ಇಟ್ಟಿದ್ದು, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳು ಕಂಡುಬಂದಿವೆ.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ, ದಲಿತ ಮುಖಂಡರು ಮತ್ತು ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ವಿಚಾರಿಸಲು ಜಿಲ್ಲಾಡಳಿತ ಭವನದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಬಡಿಗೇರ್ ಅವರ ಕಚೇರಿಗೆ ಪ್ರೊ. ಬಿ.ಕೆ. ಹೆಣ್ಣೂರು (ಶ್ರೀನಿವಾಸ ಸ್ಥಾಪಿತ ಡಿಎಸ್‌ಎಸ್ ಬೆಳಗಾವಿ ವಿಭಾಗ ಸಂಚಾಲಕ) ಗಣೇಶ ಮೇತ್ರಿ (ಜಿಲ್ಲಾ ಸಂಚಾಲಕ) ಮತ್ತು ಫಕೀರಪ್ಪ ಮಾದರ ಅವರು ಹೋಗಿ ವಿಚಾರಿಸಿದಾಗ ಉಡಾಫೆಯಿಂದ ವರ್ತಿಸಿದ್ದಾರೆ ಎಂದು ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಬೆದರಿಕೆ ಕೂಡಾ ಹಾಕಿದ್ದಾರೆ ಎನ್ನಲಾಗಿದೆ.
ಉಪನಿರ್ದೇಶಕರ ಈ ವರ್ತನೆ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಡಿರುವ ಅಗೌರವದಿಂದ ಮನಸ್ಸಿಗೆ ಘಾಸಿಯಾಗಿದೆ ಎಂದು ದಲಿತ ಮುಖಂಡರು ತಿಳಿಸಿದ್ದು, ತಪ್ಪಿತಸ್ಥ ಉಪನಿರ್ದೇಶಕರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಆರ್ ಬಿ ತಿಮ್ಮಾಪೂರ ಅವರನ್ನು ಒತ್ತಾಯಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಸಚಿವರು ಜಿಲ್ಲಾಧಿಕಾರಿಗಳಿಗೆ ಹೇಳಿ ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ.