ಮೈಸೂರು: ಬಿಪಿಎಲ್ ಕಾರ್ಡ್ ರದ್ದು ವಿಚಾರದಲ್ಲಿ ರಾಜ್ಯ ಸರಕಾರ ಆವೈಜ್ಞಾನಿಕ ನೀತಿ ಅನುಸರಿಸುತ್ತಿದೆ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಆರೋಪಿಸಿದ್ದಾರೆ.
ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ, ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ಕಸ ಬರಿದಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಿದ್ದಾರೆ ಎಂದು ದೂರಿದ್ದಾರೆ.
ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡ್ ದಾರರ ಹಕ್ಕು ಕಿತ್ತುಕೊಳ್ಳುವುದು ಖಂಡನೀಯ. ಬಿಪಿಎಲ್ ಕಾರ್ಡು ದಾರರನ್ನು ಇಳಿಮುಖಗೊಳಿಸಿ, ಭಾಗ್ಯ ಯೋಜನೆಗಳಿಗೆ ಹಣ ಹೊಂದಿಸುವ ದುರುದ್ದೇಶ ಬಿಪಿಎಲ್ ಕಾರ್ಡ್ ರದ್ದತಿ ಹಿಂದೆ ಆಡಗಿದೆ ಹೇಮಾ ಟೀಕಿಸಿದ್ದಾರೆ.
ಬಿಪಿಎಲ್ ಕಾರ್ಡ್ ರದ್ದು ಮಾಡಲು ದಾರಿ ಹುಡುಕುತ್ತಿರುವ ರಾಜ್ಯ ಸರಕಾರ, ಸಣ್ಣ ರೈತರು, ಮನೆ ನಿರ್ಮಾಣ ಅಥವಾ ಹೈನುಗಾರಿಕೆಗೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯಲು ತೆರಳಿದಾಗ ಬ್ಯಾಂಕ್ ಅಧಿಕಾರಿಗಳು ನೀವು ಅಂದಾಜು ಮೂರು ವರ್ಷ ತೆರಿಗೆ ಪಾವತಿಸಿರಬೇಕು ಎಂದು ಹೇಳಿರುತ್ತಾರೆ. ಅದರಂತೆ ಮುಗ್ಧ ಜನರು ಸಾಲ ಪಡೆಯುವ ಉದ್ದೇಶದಿಂದ ತೆರಿಗೆ ಕಟ್ಟಿರುತ್ತಾರೆ. ಆದರೆ, ಅದನ್ನೇ ನೆಪ ಮಾಡಿಕೊಂಡು ಇಂತವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ.
ಇಂತಹ ಕುಂಟು ನೆಪ ಹೇಳಿ ಬಡ ವರ್ಗದ ಜನತೆಗೆ ಸಿಕ್ಕ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವುದು ಖಂಡ ನೀಯ ಎಂದು ಹೇಮಾ ನಂದೀಶ್ ತಿಳಿಸಿದ್ದಾರೆ.