ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3,500 ರೂ. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಬೆಳಗಾವಿ ಸಮೀಪದಲ್ಲಿರುವ ಹತ್ತರಗಿ ಹೆದ್ದಾರಿ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿಯನ್ನು ಬಂದ್ ಮಾಡಿ ಘೋಷಣೆ ಕೂಗಲಾರಂಭಿಸಿದ ಕಬ್ಬು ಬೆಳೆಗಾರರು ಸಾವಿರಾರು ಸಂಖ್ಯೆಯಲ್ಲಿ ಇಡೀ ರಸ್ತೆಯನ್ನು ಆವರಿಸಿಕೊಂಡಿದ್ದರು.
ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಸವಾರರು ಕೂಡಾ ಪರದಾಡಬೇಕಾಯಿತು.
ಪೊಲೀಸರು ಬೆಳೆಗಾರರನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು.
ನ್ಯಾಯಯುತವಾದ ದರ ಸಿಗದೆ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಶೀಘ್ರ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ನಾವು ಹೋರಾಟ ಮಾಡುತ್ತಿದ್ದರೂ ಕೂಡ ಯಾವೊಬ್ಬ ಜನಪ್ರತಿನಿಧಿ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
