ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಪ್ರವಾಹ ಉಂಟಾಗಿದೆ.
ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ ಮತ್ತು ದೂಧ್ ಗಂಗಾ ನದಿಗಳು ತುಂಬಿ ಹರಿಯುತ್ತಿವೆ ಜತೆಗೆ ನಿಪ್ಪಾಣಿ ತಾಲೂಕಿನ ದೂಧಗಂಗಾ ಸೇತುವೆ ಮುಳುಗಡೆಯಾಗಿದೆ.
ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಗೆ ಕೇವಲ ಒಂದೆರಡು ಅಡಿ ಬಾಕಿ ಇದೆ. 2,079.50 ಅಡಿ ಸಾಮರ್ಥ್ಯ ಹೊಂದಿರುವ ನವಿಲು ತೀರ್ಥ ಜಲಾಶಯದಲ್ಲಿ ಸದ್ಯ 2,077.50 ಅಡಿ ನೀರು ಸಂಗ್ರಹವಾಗಿದೆ.
ಜಲಾಶಯ ಸುರಕ್ಷತೆಯ ದೃಷ್ಟಿಯಿಂದ ನೀರಾವರಿ ಇಲಾಖೆ ಅಧಿಕಾರಿಗಳು ನೀರನ್ನು ಹೊರಕ್ಕೆ ಬಿಟ್ಟಿದ್ದಾರೆ. 7,170 ಕ್ಯೂಸೆಕ್ ಒಳಹರಿವು ಇದ್ದರೆ, 5,594 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗಿದೆ.
ಜಿಲ್ಲೆಯ ದೊಡ್ಡ ಜಲಾಶಯ ಹಿಡಕಲ್ ಡ್ಯಾಂ ಬಹುತೇಕ ಭರ್ತಿಯಾಗಿದೆ. 2,175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2,174.66 ಅಡಿ ನೀರು ಸಂಗ್ರಹವಾಗಿದೆ. 13,337 ಕ್ಯೂಸೆಕ್ ನೀರು ಒಳಹರಿವು ಇದೆ. 5,290 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡುತ್ತಿರುವುದರಿಂದ ಮಲಪ್ರಭಾ, ಘಟಪ್ರಭಾ ನದಿ ಸೇರಿದಂತೆ ಇನ್ನಿತರ ನದಿಗಳ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಸೂಚನೆ ನೀಡಿದೆ.