ಆರೋಗ್ಯ- ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್

ನಂಜನಗೂಡು: ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು. ಪೌಷ್ಟಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣ ಒಟ್ಟಿಗೆ ದೊರಕಿದಾಗ ಮಾತ್ರ ಸಮಗ್ರ ಬೆಳವಣಿಗೆ ಸಾಧ್ಯ ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್. ದಿನೇಶ್ ಹೇಳಿದರು.

ನಂಜನಗೂಡಿನ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪೋಶನ್ ಬಿ-ಪಡಾಯಿ ಬಿ ಕಾರ್ಯಕ್ರಮದಲ್ಲಿ ನಂಜನಗೂಡು ವಿಭಾಗದ ಅಂಗನವಾಡಿ ಕಾರ್ಯಕರ್ತರಿಗೆ ಮೂರು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಶು ಅಭಿವೃದ್ಧಿ ಅಧಿಕಾರಿ ಕೆ.ಎಸ್. ಭವ್ಯಶ್ರೀ ಅವರು ಮಾತನಾಡಿ ಮಕ್ಕಳಲ್ಲಿ ಪೌಷ್ಟಿಕತೆ ಮತ್ತು ಕಲಿಕೆಯ ಗುಣಮಟ್ಟವನ್ನು ಏರಿಕೆ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಕಾರ್ಯಗಾರದ ಮೂಲಕ ಹೆಚ್ಚು ತರಬೇತಿಯನ್ನು ಪಡೆದುಕೊಂಡು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕಾರ್ಯವನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಎಂ. ಶಿವಕುಮಾರ್, ಮೇಲ್ವಿಚಾರಕರಾದ ಹೇಮ ಕುಮಾರಿ, ಸವಿತಾ ಕುಮಾರಿ, ಶೈಲಾ ,ಸುಶೀಲ ಉಪಸ್ಥಿತರಿದ್ದರು.