ನಂಜನಗೂಡಿನಲ್ಲಿ ತಾಯಿ-ಮಗುವಿನ ಆರೈಕೆ ಕ್ಷಯ, ಕುಷ್ಠರೋಗಗಳ ಬಗ್ಗೆ ಜಾಗೃತಿ

Spread the love

ನಂಜನಗೂಡು,ಮಾ.8: ಜಿಲ್ಲಾ ಪಂಚಾಯತ್, ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬಾಲ್ಯವಿವಾಹ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಮತ್ತಿತರ ವಿಷಯಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತಾಯಿ-ಮಗುವಿನ ಆರೈಕೆ, ಕ್ಷಯ ಮತ್ತು ಕುಷ್ಠರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಜಾನಪದ ಕಲಾ ಪ್ರದರ್ಶನ ಮತ್ತು ಬೀದಿ ನಾಟಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಈ ಕಾರ್ಯಕ್ರಮಕ್ಕೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಕೆ. ಯದುಗಿರೀಶ್ ಚಾಲನೆ ನೀಡಿದರು.

ಬಾಲ್ಯವಿವಾಹದಿಂದ ಉಂಟಾಗುವ ಪರಿಣಾಮಗಳು ಮತ್ತು ಕ್ಷಯ-ಕುಷ್ಠರೋಗಗಳಿಗೆ ತುತ್ತಾಗದಂತೆ ಜಾಗೃತಿ ವಹಿಸುವ ಕುರಿತು ಅರಿವು ಮೂಡಿಸಲಾಯಿತು.

ಮುಂಬರುವ ತಾಪಮಾನದ ದಿನಗಳಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಗ್ರಾಮೀಣ ಪ್ರದೇಶಗಳ ಜನರು ತಮ್ಮ ಸುತ್ತಮುತ್ತಲಿನ ಪರಿಸರದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳುವಳಿಕೆ ಮಂಡಿಸಲಾಯಿತು.

ಕುಡಿಯಲು ಶುದ್ಧ ನೀರು ಬಳಸುವ ಕುರಿತು ಜಾಗೃತಿ ಮೂಡಿಸಲು ಮಹಾಬೆಳಕು ತಂಡದ ವತಿಯಿಂದ ತಾಲ್ಲೂಕಿನ ಕೊತ್ತನಹಳ್ಳಿ ಕಾಲೋನಿ, ಮುಳ್ಳೂರು, ಹೊಸಕೋಟೆ, ಮರಳೂರು, ಡೋರನಕಟ್ಟೆ ಕಾಲೋನಿಗಳಲ್ಲಿ ಬೀದಿ ನಾಟಕ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಕರುಣಾಮೂರ್ತಿ, ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕ ಮಹೇಶ್, ಮಹಾಬೆಳಕು ತಂಡದ ಅಧ್ಯಕ್ಷರಾದ ಕಾತ್ಯಾಯಿನಿ ಯಶೋಮಿತ್ರ, ಅನಸೂಯ, ಚೆಲುವಸ್ವಾಮಿ, ಕೃಷ್ಣ, ರಾಜೇಶ್ವರಿ, ರತನ್ ಮತ್ತಿತರರು ಹಾಜರಿದ್ದರು.