ಮೈಸೂರು: ನರೇಗಾ ಕೆಲಸದಲ್ಲಿ ಹೆಚ್ಚು ಮಹಿಳೆಯರು ಭಾಗವಹಿಸಬೇಕೆಂದು ಇಒ ಧರಣೇಶ್ ಕರೆ ನೀಡಿದರು.
ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ತ್ರೀ ಚೇತನ ಅಭಿಯಾನʼಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್ ಎಸ್.ಪಿ ಚಾಲನೆ ನೀಡಿದರು.
ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮದಲ್ಲಿ 2025-2026ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅನುಮೋದನೆ ಯಾಗಿರುವ ವೈಯಕ್ತಿಕ ಕಾಮಗಾರಿಗಳ ಫಲಾನುಭವಿಗಳಿಗೆ ಕಾಮಗಾರಿ ಪ್ರಾರಂಭ ಆದೇಶ ಪತ್ರ ವಿತರಿಸಿ ನಂತರ ಮಾತನಾಡಿದರು.
ಮಹಾತ್ಮಗಾಂಧಿ-ನರೇಗಾ ಯೋಜನೆಯಡಿ ಶೇ.60ರಷ್ಟು ಮಹಿಳಾ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ ನಿಂದ ಜೂನ್ ವರೆಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ತ್ರೀ ಚೇತನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕೆಲಸಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಪ್ರಸಕ್ತ ಸಾಲಿನಿಂದ ಉದ್ಯೋಗ ಖಾತರಿ ಯೋಜನೆಯಡಿ ನೀಡುವ ಕೂಲಿ ಮೊತ್ತವು ರೂ.349 ರಿಂದ ರೂ.370ಕ್ಕೆ ಹೆಚ್ಚಳವಾಗಿದೆ. ಗ್ರಾಮೀಣ ಭಾಗದ ಅರ್ಹ ಕುಟುಂಬವೊಂದಕ್ಕೆ ನೂರು ದಿನಗಳ ಕೆಲಸ ಗ್ಯಾರಂಟಿ ಇದ್ದು, ವರ್ಷದಲ್ಲಿ 37 ಸಾವಿರ ರೂ. ಗಳಿಸಬಹುದಾಗಿದೆ ಎಂದು ವಿವರಿಸಿದರು.
ಯೋಜನೆಯಡಿ ವೃದ್ದರು, ಗರ್ಭಿಣಿಯರು, ಬಾಣಂತಿಯರು, ವಿಶೇಷ ಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು ಹಾಗೂ ಪ್ರಥಮ ಚಿಕಿತ್ಸೆ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ ಎಂದು ಧರಣೇಶ್ ತಿಳಿಸಿದರು.
ಗ್ರಾಮೀಣ ಉದ್ಯೋಗ ಖಾತರಿ ಸಹಾಯಕ ನಿರ್ದೇಶಕರಾದ ರಘುನಾಥ್ ಕೆ.ಎಂ ಅವರು ಮಾತನಾಡಿ, ನರೇಗಾ ಯೋಜನೆಯಡಿ ಗಂಡು-ಹೆಣ್ಣಿಗೆ ಸಮಾನ ಕೂಲಿ ದೊರೆಯಲಿದೆ. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನರೇಗಾ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಎಸ್.ನಿಂಗರಾಜು, ಎನ್.ಆರ್.ಎಲ್.ಎಂ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಟಿ.ಶ್ರೀಕಾಂತ್ ಮತ್ತು ಸಿಬ್ಬಂದಿ, ಎಂಬಿಕೆ, ಎಲ್.ಸಿ.ಆರ್.ಪಿ, ಸಖಿ ಹಾಗೂ ಪಶು ಸಖಿಯರು ಹಾಜರಿದ್ದರು.