ಹತ್ತಿಕುಣಿಯಲ್ಲಿ ರೈತರ ಕಾರು ಹುಣ್ಣಿಮೆ ಸಂಭ್ರಮ

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಕಾರು ಹುಣ್ಣಿಮೆ ಸಂಭ್ರಮ‌ ಮೇಳೈಸಿತ್ತು.

ರೈತರು ತಮ್ಮ ಎತ್ತುಗಳನ್ನು ಹೂಗಳು, ಬಣ್ಣಗಳಿಂದ ಅಲಂಕರಿಸಿ,ಸಂಗೀತ ವಾಧ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಬೆಳಿಗ್ಗೆ ಗ್ರಾಮದ ಹೊರ ವಲಯದಲ್ಲಿರುವ ಹಳ್ಳಕ್ಕೆ ಎತ್ತುಗಳನ್ನು ಕರೆದೊಯ್ದು ಸ್ನಾನ ಮಾಡಿಸಿ, ಅಲಂಕರಿಸಿದರು.

ಮಳೆಗಾಲ ಆರಂಭವಾಗಿದೆ, ಯಾವುದೇ ರೋಗಗಳು ಬರದಂತೆ ಆಯುರ್ವೇದಿಕ್ ಜೌಷಧ ಕುಡಿಸಿ, ಅವಗಳ ಹಣೆಗೆ ಹೊಸ ಗೆಜ್ಜೆ, ಮಗಡ, ವಿವಿಧ ಬಣ್ಣಗಳ ಜುಲಾ ಹಾಕಿ ಸಿಂಗರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ವಿವಿಧ ಸಂಗೀತ ವಾಧ್ಯಗಳೊಂದಿಗೆ ಮೆರವಣಿಗೆ ಮಾಡಿದರು.

ತಮಟೆ ಸದ್ದಿಗೆ ಪಡ್ಡೆ ಹುಡುಗರು ಸ್ಟೆಪ್ ಹಾಕಿ ಕುಣಿದು ಖುಷಿ ಪಟ್ಟರು.

ಈ ವೇಳೆ ಮಾತನಾಡಿದ ರೈತ ಸಂಜೀವಕುಮಾರ ಪುಟಗಿ ಹಾಗೂ ಮಲ್ಲಿಕಾರ್ಜುನ ಸೋಮಣ್ಣೋರ, ನಾವೂ ಕೃಷಿಯನ್ನೆ ಅವಲಂಭಿಸಿ ಹಳ್ಳಿಗಳಲ್ಲಿ ಜೀವನ ಸಾಗಿಸುತ್ತೇವೆ, ನಮ್ಮ ಜೊತೆ ವರ್ಷವಿಡೀ ಜೋಡು ಎತ್ತುಗಳು ಜಮೀನನ್ನು ಪರಿಶ್ರಮದಿಂದ ಉಳುಮೆ ಮಾಡುತ್ತವೆ, ಅವುಗಳ ಸಹಕಾರದಿಂದಲೇ ಆಹಾರ ಪದಾರ್ಥಗಳನ್ನು ಉತ್ಪಾಧಿಸಿ, ನಾವೂ ಹಾಗೂ ನಿಸರ್ಗದಲ್ಲಿರುವ ಪಶು-ಪಕ್ಷಿಗಳು ಜೀವಂತವಾಗಿದ್ದೇವೆ ಎಂದು ಹೇಳಿದರು.

ವರ್ಷಕ್ಕೊಮ್ಮೆ ಕಾರು ಹುಣ್ಣಿಮೆ ಬರುತ್ತದೆ, ಆ ದಿನ ನಾವು ಎತ್ತುಗಳ ಆರೋಗ್ಯ ಗಮನಿಸಿ, ಅಗತ್ಯ ಉಪಚಾರ ಮಾಡಿ, ಸಿಂಗಾರಗೊಳಿಸಿ, ಸಂಭ್ರಮದಿಂದ ಹುಣ್ಣಿಮೆ ಆಚರಿಸುವ ಮೂಲಕ ಅವಗಳಿಗೆ ಸಂತಸ ಕೊಟ್ಟು ಕೃತಜ್ಞತೆ ಅರ್ಪಿಸುತ್ತೇವೆ ಎಂದು ತಿಳಿಸಿದರು.