ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಶಾಸಕ ಮಂಜುನಾಥ್

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮುಕ್ತಾಯ ಹಂತದಲ್ಲಿರುವ ಶಿವನಸಮುದ್ರದ ಸುಪ್ರಸಿದ್ದ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಹನೂರು ಶಾಸಕ ಎಂ.ಆರ್. ಮಂಜುನಾಥ್‌ ವೀಕ್ಷಿಸಿದರು.

ದೇವಸ್ಥಾನದ ಪಾಕಶಾಲೆ, ದೇವಾಲಯದ ಸುತ್ತ ನೆಲಹಾಸು ಹಾಗೂ ವಿದ್ಯುತ್ ನವೀಕರಣ ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸುವಂತೆ ಪುರಾತತ್ವ ಇಲಾಖೆಗೆ ತಾಕೀತು ಮಾಡಿದರಲ್ಲದೆ ದೇವಾಲಯದ ಸಂಪ್ರೋಕ್ಷಣೆಗೆ ದಿನಾಂಕ ನಿಗದಿ ಪಡಿಸಿ ಎಂದು ಅರ್ಚಕರಿಗೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯ ಅನುದಾನ 2.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾಮಗಾರಿ ನಿರ್ವಹಣೆಯನ್ನು ಪುರತತ್ವ ಇಲಾಖೆ ವಹಿಸಿಕೊಂಡಿದೆ.

ದೇವಾಲಯದ ನವೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕಾಮಗಾರಿಗೆ ಬಿಡುಗಡೆಯಾಗಿದ್ದ 2.50 ಕೋಟಿ ರೂ. ಅನುದಾನ ಬಳಕೆಯಾಗಿದ್ದು ಪಾಕಶಾಲೆ, ದೇವಾಲಯದ ಆವರಣದ ನೆಲಹಾಸು ಹಾಗೂ ವಿದ್ಯುತ್ ನವೀಕರಣ ಕಾಮಗಾರಿಗಳಷ್ಟೆ ಬಾಕಿ ಇರುವುದರ ಬಗ್ಗೆ ಕೊಳ್ಳೇಗಾಲ ಉಪವಿಭಾಗಾಕಾರಿ ಹಾಗೂ ಸಾಮೂಹಿಕ ದೇವಾಲಯಗಳ ಆಡಳಿತ ಅಧಿಕಾರಿಯೂ ಆಗಿರುವ ಬಿ.ಆರ್. ಮಹೇಶ್ ಅವರು ಶಾಸಕರಿಗೆ ವಿವರಣೆ ನೀಡಿದರು.

ಇನ್ನೇನು ಕಾಮಗಾರಿ ಮುಗಿಯುತ್ತಿದ್ದು ಆದಷ್ಟು ಬೇಗ ದೇವಾಲಯದ ಸಂಪ್ರೋಕ್ಷಣೆಗೆ ಸೂಕ್ತವಾದ ದಿನಾಂಕ ನಿಗದಿ ಪಡಿಸಿಕೊಳ್ಳಿ ಎಂದು ಅರ್ಚಕರಾದ ಶ್ರೀಧರ್ ಆಚಾರ್ ಅವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಚಕರು ಕಾರ್ತಿಕ ಮಾಸ ಸೂಕ್ತವಾಗಿದೆ. ಹಾಗಾಗಿ ಕಾರ್ತಿಕ ಮಾಸದಲ್ಲೆ ಕಾರ್ಯಕ್ರಮ ನಡೆಸುವುದು ಒಳ್ಳೆಯದು ಎಂದು ಈ ವೇಳೆ ಶಾಸಕರಿಗೆ ಸಲಹೆ ನೀಡಿದರು.

ಭರದಿಂದ ಸಾಗುತ್ತಿರುವ ರಂಗನಾಯಕಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ: ಜಗನ್ಮೋಹನ ರಂಗನಾಥ ಸ್ವಾಮಿ ದೇವಸ್ಥಾನದ ಮಗ್ಗುಲಲ್ಲಿರುವ ಸೌಮ್ಯಲಕ್ಷ್ಮಿ(ರಂಗನಾಯಕಿ) ಅಮ್ಮನವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಕೂಡಾ ಭರದಿಂದ ಸಾಗಿದೆ.

ಸುಮಾರು 1.25 ಕೋಟಿ ರೂ ವೆಚ್ಚದಲ್ಲಿ ದಾನಿಗಳಾದ ಆಂಧ್ರ ಪ್ರದೇಶದ ಉದ್ಯಮಿ, ಎ.ಎಂ.ಆರ್. ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ರೆಡ್ಡಿ ಅವರು ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೊಂಡಿದ್ದು ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಈ ಎರಡೂ ಕಾಮಗಾರಿಗಳನ್ನು ವೀಕ್ಷಿಸಿದರು.

ಈ ವೇಳೆ ಸಾಮೂಹಿಕ ದೇವಾಲಯಗಳ ಕಾರ್ಯನಿರ್ವಹಕ ಅಧಿಕಾರಿ ಸುರೇಶ್ ಅವರು ಶಾಸಕರಿಗೆ ದೇವಾಲಯದ ರೂಪುರೇಷೆಯ ಕುರಿತು ನೀಲನಕ್ಷೆ ತೋರಿಸಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಅರ್ಚಕರುಗಳಾದ ಶ್ರೀಧರ್ ಆಚಾರ್ ಮುಖಂಡರುಗಳಾದ ಹನೂರು ಮಂಜೇಶ್, ವಿಜಯ್ ಕುಮಾರ್ ಮತ್ತಿತರರು ಹಾಜರಿದ್ದರು.