ರಾಮನ ಗುಡ್ಡ ಜಲಾಶಯಕ್ಕೆ ನೀರು: ಪೈಪ್ ಲೈನ್ ಕಾಮಗಾರಿಗೆ ಮಂಜುನಾಥ್ ಚಾಲನೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಹನೂರು ವಿಧಾನಸಭಾ ಕ್ಷೇತ್ರದ ರಾಮನ ಗುಡ್ಡ ಜಲಾಶಯಕ್ಕೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು.

ಈ ಭಾಗದ ರೈತರ ಬಹುದಿನಗಳ ನಿರೀಕ್ಷಿತ ಯೋಜನೆ ರಾಮನಗುಡ್ಡ ಕೆರೆಗೆ ಏತ ನೀರಾವರಿ ಮೂಲಕ ನದಿಯಿಂದ ನೀರು ತುಂಬಿಸುವ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದ ಕರಿಕಲ್ಲು ಗುಡ್ಡದಲ್ಲಿ ಸುಮಾರು 2.5 ಕೋಟಿ ರೂ ಅಂದಾಜು ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ದಶಕಗಳ ಬೇಡಿಕೆ ಈಡೇರಿಕೆಗೆ ಶಾಸಕರು ಸಾಕ್ಷಿಯಾದರು.

ಈ ವೇಳೆ ಮಾತನಾಡಿದ ಶಾಸಕರು ರಾಮನಗುಡ್ಡ ಜಲಾಶಯ ನಿರ್ಮಾಣವಾಗಿ 40 ವರ್ಷ ಪೂರೈಸಿದರೂ ಕೂಡ ಇಲ್ಲಿಗೆ ಶಾಶ್ವತವಾಗಿ ನೀರು ತುಂಬಿಸಲಿಕ್ಕೆ ಆಗಿರಲಿಲ್ಲ. ಕಾರಣ ಈ ಭಾಗದಲ್ಲಿ ಮಳೆ ಕಡಿಮೆ ಎಂದು ಹೇಳಿದರು.

ಏತ ನೀರಾವರಿ ಮೂಲಕ ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೈಪ್ ಲೈನ್ ಕಾಮಗಾರಿ ಕಳೆದ ಏಳೆಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿಚಾರವನ್ನು ಈ ಭಾಗದ ರೈತರು ಬಂದು ನನಗೆ ಹೇಳುತ್ತಿದ್ದರು. ಕೇವಲ 2 ರಿಂದ 3 ಕಿಲೋಮೀಟರ್ ನಷ್ಟು ಪೈಪ್ ಲೈನ್ ಅಳವಡಿಸಿ ನೀರನ್ನು ಕೊಂಡೊಯ್ದು ಹಳ್ಳಕ್ಕೆ ಬಿಟ್ಟರೆ ರಾಮನ ಗುಡ್ಡ ಜಲಾಶಯ ತುಂಬಿ ಈ ಭಾಗದ ರೈತರ ಬಾಳು ಹಸನಾಗಲಿದೆ ಎಂದು ರೈತರು ಸಭೆಗಳಲ್ಲಿ ಹೇಳಿದಾಗ ನಾನು ಕೂಡಲೇ ಕಾರ್ಯ ಪ್ರವೃತ್ತನಾಗಿ ನೀರಾವರಿ ಇಲಾಖೆಯ ಇಂಜಿನಿಯರ್ ಗಳನ್ನು ಕರೆಯಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳೆದ ಒಂದು ತಿಂಗಳಿಂದ ಈಚೆಗೆ ರಾಮನಗುಡ್ಡ ಜಲಾಶಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪ್ರಾರಂಭವಾಗಿದೆ, ಇನ್ನು 15 ದಿನದೊಳಗೆ ಕಾಮಗಾರಿ ಮುಕ್ತಾಯಗೊಳ್ಳಲಿದೆ. ರಾಮನಗುಡ್ಡ ಜಲಾಶಯಕ್ಕೆ ಕಾವೇರಿ ನೀರು ಹರಿದರೆ ಈ ಭಾಗದ ರೈತರ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಾಗಿ ರೈತರ ಭವಣೆ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸತ್ಕಾರ್ಯಕ್ಕೆ ಎಲ್ಲಾ ಸಂಘಟನೆಗಳ ಸಹಕಾರ ಅಗತ್ಯವಾಗಿದ್ದು ಎಲ್ಲರೂ ಕೈಜೋಡಿಸಿ ಈ ಒಳ್ಳೆಯ ಕಾರ್ಯವನ್ನು ಮಾಡುವ ಮೂಲಕ ವಿಭಾಗದ ರೈತರ ಬಾಳಿಗೆ ಬೆಳಕಾಗೋಣ ಎಂದು ಕರೆ ನೀಡಿದರು. ಮಲೆಯ ಮಹದೇಶ್ವರ ಮಂಟೇಸ್ವಾಮಿ ಅವರ ಆಶೀರ್ವಾದ ಲಭಿಸಿ ಯಾವುದೇ ತೊಡಕಿಲ್ಲದಂತೆ ಆದಷ್ಟು ಬೇಗ ಈ ಕೆಲಸ ಸುಸೂತ್ರವಾಗಿ ನೆರವೇರಿ ಕೆರೆಗೆ ನೀರು ಹರಿಯಲಿ ಎಂದು ಹಾರೈಸಿದರು.

ಈ ಬಹುನಿರೀಕ್ಷಿತ ಯೋಜನೆಯಿಂದ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ  ತೋಮಿಯರ್ ಪಾಳ್ಯ ಹಾಗೂ ಕೆವಿಎನ್ ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ರಾಮನಗುಡ್ಡ ಅಚ್ಚುಕಟ್ಟು ಪ್ರದೇಶದ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿರುವ ತೋಡುಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ,ಈ ಭಾಗದಲ್ಲಿ ಹಲವಾರು ವರ್ಷಗಳ ಬಹು ಬೇಡಿಕೆಯ ರೈತರ ಕನಸು ನನಸಾಗಲು ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.

ಇದೇ ರೀತಿ ಹುಬ್ಬೆ ಹುಣಸೆ ಜಲಾಶಯಕ್ಕೂ ಕಾಯಕಲ್ಪವಾಗಬೇಕಿದ್ದು ಮೊನ್ನೆ ನಕ್ಷೆಯೊಂದನ್ನು ಪರಿಶೀಲಿಸುತ್ತಿದ್ದ ವೇಳೆ ಒಂದು ಉಪಾಯ ದೊರೆತಿದೆ. ಈ ಜಲಾಶಯದ ಅಭಿವೃದ್ಧಿಗೆ 18 ಕೋಟಿ ರೂ. ಬೇಕಾಗುತ್ತದೆ, ಸರ್ಕಾರದಲ್ಲಿ ಕಡಿಮೆ ಹಣದಲ್ಲಿ ಹೆಚ್ಚು ಫಲ ಕೊಡುವಂತಹ ಕಾರ್ಯಕ್ಕೆ ಕೈ ಹಾಕುತ್ತಿದ್ದೇನೆ. ಹೆಚ್ಚು ಹೆಚ್ಚು ದುಡ್ಡು ಕೇಳಿದಷ್ಟು ಅದು ಮುಂದಕ್ಕೆ ಹೋಗುತ್ತದೆ ಅದಕ್ಕಾಗಿ ಗುಂಡಲ್ ಜಲಾಶಯದಿಂದ ಜಿ.ಆರ್.ಬಿ.ಸಿ ಮುಖಾಂತರ ನೀರು ಕೊಡಲಿಕ್ಕೆ ಒಂದು ಯೋಜನೆ ಮಾಡಿದ್ದೇವೆ. ಅದು ಫಲಪ್ರದವಾದರೆ ಆದಷ್ಟು ಬೇಗ ಆದಕ್ಕೂ ಒಂದು ಕಾಯಕಲ್ಪ ದೊರೆಯಲಿದೆ. ಈಗ ಇಂಜಿನಿಯರ್ ಗಳು ಬಂದಿದ್ದಾರೆ ಪರಿಶೀಲನೆ ನಡೆಸಲಿದ್ದೇವೆ ಅದು ಕೈಗೂಡಿದರೆ ಆದಷ್ಟು ಬೇಗ ನೀರು ಕೊಡುವ ಕೆಲಸ ಮಾಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಹನೂರು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹ ಇದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ,
ಆಗಾಗ ಮಳೆ ಬೀಳುತ್ತಿರುವುದರಿಂದ ಅದನ್ನು ಸಂಪೂರ್ಣವಾಗಿ ಬರಪೀಡಿತ ಎಂದು ಘೋಷಣೆ ಮಾಡಲಿಕ್ಕೆ ಆಗುತ್ತಿಲ್ಲ ಎಂದು ಉತ್ತರಿಸಿದರು.

ಈ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಮಾಡಲಾಗಿದೆ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ. ನನ್ನನ್ನು ಟಾಸ್ಕ್ ಫೋರ್ಸ್ ಗೆ ಬೋರ್ವೆಲ್ ಡ್ರಿಲ್ ಮಾಡಲಿಕ್ಕೆ ಅವಕಾಶ ಕೊಟ್ಟರೆ ಸಾಕು ಈ ಕುರಿತು ಸಚಿವರ ಗಮನಕ್ಕೆ ತಂದಿದ್ದೇನೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ವರದಿ ಮಾಡಿಸಿದ್ದೇನೆ ಎಂದು ಮಂಜುನಾಥ್ ಮಾಹಿತಿ ನೀಡಿದರು.

ವಡಕೆಹಳ್ಳ ಸುತ್ತಮುತ್ತ ನೀರಿನ ಸಮಸ್ಯೆ ಇದ್ದು ಅಲ್ಲಿ ಗುಡ್ಡದ ಮೇಲೆ ಜಾಕ್ ವೆಲ್ ಮೂಲಕ ನೀರು ಸರಬರಾಜು ಮಾಡಿ ಸುತ್ತಮುತ್ತಲ ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಛಾದರೆ ಕುಡಿಯುವ ನೀರಿನ ಭವಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ ಎಂದು ಶಾಸಕರು ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಮಾತನಾಡಿ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಈ ಹಿಂದೆ ಕ್ಷೇತ್ರವನ್ನು ಆಳಿದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿನ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂದಾಗಲಿಲ್ಲ.

ಕಾವೇರಿ ನದಿ ಮಳೆಗಾಲದಲ್ಲಿ ತುಂಬಿ ತಮಿಳುನಾಡಿನ ಮೂಲಕ ಸಮುದ್ರಕ್ಕೆ ನೀರು ಹರಿದು ಹೋಗುತ್ತಿದೆ ಹೀಗಾಗಿ ಶಾಸಕರು ಉತ್ತಮ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಇರುವಷ್ಟು ಕೆರೆಕಟ್ಟೆಗಳಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಉತ್ತಮವಾದ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ರೈತ ಸಂಘಟನೆ ಸಹ ಶಾಸಕರಿಗೆ ಪೂರಕವಾಗಿ ಸ್ಪಂದಿಸುತ್ತದೆ ಅಧಿಕಾರಿಗಳು ಸಹ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಕ್ಷೇತ್ರದ ಜನತೆಯ ಕೆಲಸ ಕಾರ್ಯಗಳಿಗೆ ಸ್ಪಂದಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ ಮಾತನಾಡಿ ಶಾಸಕ ಎಂ.ಆರ್. ಮಂಜುನಾಥ್ ಅವರು ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕ್ಷೇತ್ರದ ಜನತೆಯ ಬಹು ಬೇಡಿಕೆಯ ನೀರಾವರಿ ಯೋಜನೆಗಳಿಗೆ ಅನುಕೂಲ ಕಲ್ಪಿಸಬೇಕು ರೈತ ಸಂಘ ಸಹ ಅವರ ಕೆಲಸ ಕಾರ್ಯಗಳಿಗೆ ಪೂರಕವಾಗಿ ಸ್ಪಂದಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿ. ಪಂ ಸದಸ್ಯ ಜೆ. ಶಿವಮೂರ್ತಿ, ಮುಖಂಡರುಗಳಾದ ಜಸ್ಟಿನ್, ಸಿಂಗನಲ್ಲೂರು ರಾಜಣ್ಣ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಮಹೇಶ್, ಕಬಿನಿ ಇ ಇ ಉಮೇಶ್, ಎಇಇಗಳಾದ ಕರುಣಾಮಯಿ, ರಾಮಕೃಷ್ಣ, ಗುತ್ತಿಗೆದಾರ ಆರ್ ಕೆ ರೆಡ್ಡಿ, ಅಮೃತ ಕನ್ಸ್ಟ್ರಕ್ಷನ್ ಬೆಂಗಳೂರು ಮತ್ತಿತರರು ಹಾಜರಿದ್ದರು.