7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಯೋಜನೆ ಅನುಷ್ಠಾನ:ಮಂಜುನಾಥ್

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬಹುನಿರೀಕ್ಷಿತ ತೆಳ್ಳನೂರು ಶಾಖಾ ನಾಲೆಯ 7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರೊದಗಿಸುವ ಯೋಜನೆ ಅನುಷ್ಠಾನ ಗೊಳಿಸಿ 2026 ಕ್ಕೆ ಈ ಭಾಗದ ರೈತರ 2 ಬೆಳೆಗಳಿಗೆ ನೀರು ಹರಿಸುತ್ತೇನೆ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದರು.

ತಾಲ್ಲೂಕಿನ ತೆಳ್ಳನೂರು ಶಾಖಾ ನಾಲೆ ವ್ಯಾಪ್ತಿಯ 7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಸಂಬಂಧ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ನೀರಾವರಿ ಇಲಾಖೆ  ಆಯೋಜಿಸಿದ್ದ ತೆಳ್ಳನೂರು ಹಾಗೂ ಚಿಕ್ಕಲ್ಲೂರು ಗ್ರಾ.ಪಂ. ವ್ಯಾಪ್ತಿಯ ರೈತರ ಹಿತಾಸಕ್ತಿ ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಆಲಿಸಿ ಶಾಸಕರು ಮಾತನಾಡಿದರು.

ಈ ಭಾಗದ ರೈತರು ಬಹಳ ಶ್ರಮಜೀವಿಗಳು, ಆದರೆ ಬೆಳೆ ಬೆಳೆಯಲು ನೀರಿಲ್ಲ,ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ 7800 ಎಕರೆ ಅಚ್ಚುಕಟ್ಟು ಜಮೀನುಗಳಲ್ಲಿ ಬೋರ್ವೆಲ್ ಮೂಲಕ ಅಂತರ್ ಜಲ ಹರಿಸಿ ಬೆಳೆ ಬೆಳೆಯಲಾಗುತ್ತಿದೆ ಇದನ್ನು ಬದಲಾಯಿಸಬೇಕು, ರೈತರ ಎರಡು ಬೆಳೆಗಳಿಗೆ ಕಬಿನಿ ನಾಲೆ ನೀರು ಕೊಡಬೇಕೆಂಬ ತೀರ್ಮಾನ ಮಾಡಿ,ಕಾರ್ಯರೂಪಕ್ಕೆ ತರಲು ಹೊರಟಿದ್ದೇನೆ ಎಂದು ಹೇಳಿದರು.

ತೆಳ್ಳನೂರು ಶಾಖಾ ನಾಲೆಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಸಂಪೂರ್ಣವಾಗಿ ಕಾಲುವೆ ನೀರಿನ ಸೌಲಭ್ಯ ತಲುಪಿಲ್ಲ, ಕೆಲವು ಲೋಪದೋಷಗಳಿಂದ ಸಮಸ್ಯೆ ಉಂಟಾಗಿದೆ. ಇದನ್ನು ಪರಿಹರಿಸಿ ಈ ಭಾಗದ ರೈತರ ಹಿತಕಾಯಬೇಕೆಂಬ ಉದ್ದೇಶದಡಿ ರೈತರ ಸಭೆ ಕರೆದಿದ್ದೇವೆ. ಈ ಯೋಜನೆ ಅನುಷ್ಠಾನ ಗೊಂಡರೆ ಕೃಷಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

2025-26 ನೇ ಸಾಲಿನ ವರ್ಷಕ್ಕೆಈ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದೇನೆ. ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರುತ್ತೇನೆ, ಸಭೆಯಲ್ಲಿ ರೈತರು,ಜನರಿಂದ ಉತ್ತಮ ಸಹಕಾರ ದೊರೆತಿದೆ ಎಂದು ಮಂಜುನಾಥ್ ತಿಳಿಸಿದರು.

7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದ ಗಿಸುವ ಈ ಯೋಜನೆ ಕಾರ್ಯ ತ್ವರಿತವಾಗಿ ಆಗಲಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ರೈತರು ಪರಿಹಾರ ಪಡೆಯುವ ನಿಟ್ಟಿನಲ್ಲಿ ಸೂಕ್ತ ದಾಖಲೆಗಳನ್ನು ನೀಡಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

357 ಫಲಾನುಭವಿಗಳ ದಾಖಲಾತಿಗಳ ಅಗತ್ಯವಿದ್ದು ಇದೀಗ 97 ಫಲಾನುಭವಿಗಳ ದಾಖಲೆಗಳನ್ನು ಕಲೆ ಹಾಕಲಾಗಿದೆ, ಉಳಿದವರು ಸಹ ದಾಖಲೆ ನೀಡಿದರೆ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ, ಎಲ್ಲಾ ಫಲಾನುಭವಿಗಳಿಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಯಲ್ಲೆ ಬೆಲೆ ನಿಗಧಿಪಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಈ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸೋಣ ಎಂದರೆ ಕೆರೆ ನೀರು ತುಂಬಿಸಿ ಎಂದು ಹೇಳುತ್ತಾರೆ. ಆದರೆ ಈ ಭಾಗದಲ್ಲಿ ನೀರು ಸಂಗ್ರಹಿಸುವಂತಹ ಯಾವುದೇ ದೊಡ್ಡ ಕೆರೆಗಳಿಲ್ಲ ಇಲ್ಲಿ ನಾಲೆಗಳು ಹಾಯ್ದು ಹೋಗುವ ಸ್ಥಳಗಳಲ್ಲಿ ಕೃಷಿಗೆ ಯೋಗ್ಯವಲ್ಲದ ಜಮೀನುಗಳಿದ್ದರೆ ಆ ಸ್ಥಳಗಳಲ್ಲಿ ಕೆರೆಗಳನ್ನು ನಿರ್ಮಿಸಿ ನೀರು ಸಂಗ್ರಹಣೆ ಮಾಡಲು ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಹಾಗೆಯೇ ಸುತ್ತಮುತ್ತಲ ಗ್ರಾಮಗಳಲ್ಲಿ ಕೃಷಿಗೆ ಯೋಗ್ಯವಲ್ಲದ ಜಮೀನುಗಳಿದ್ದರೆ ಅಲ್ಲಿ ಕರೆ ನಿರ್ಮಿಸಿ ಅಂತರ್ಜಲ ಹೆಚ್ಚುವಂತೆ ಪ್ರಯತ್ನಿಸೋಣ.

ನೀರು ಹಸಿರು ಕಂಡರೆ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತವೆ. ಅರಣ್ಯದೊಳಗೆ ನೀರಿನ ಸೆಲೆ ಇರುವ ಕಡೆ ಒಂದು ಬೋಲ್ (ಕೆರೆ) ಮಾಡಲು ಅನುಮತಿ ಪಡೆಯಲು ಯತ್ನಿಸಿದ್ದೇನೆ. ಇದು ಯಶಸ್ವಿಯಾಗಿ ಅರಣ್ಯದೊಳಗೇ ನೀರು ಸಿಕ್ಕರೆ ಯಾವುದೇ ಪ್ರಾಣಿ ಹೊರಗೆ ಬರುವುದಿಲ್ಲ. ಹಾಗೆ ಇದರಿಂದ ಅರಣ್ಯದಂಚಿನ ರೈತರ ಜಮೀನುಗಳ ಅಂತರ್ಜಲ ಹೆಚ್ಚಲಿದೆ ಎಂದು ಶಾಸಕ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಕಬಿನಿ ಕಾರ್ಯಪಾಲಕ ಅಭಿಯಂತರ ಈರಣ್ಣ ಮಾತನಾಡಿ, ಈ ಯೋಜನೆ ಅನುಷ್ಠಾನಕ್ಕೆ 287.19  ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಅದರಲ್ಲಿ 219 .44 ಎಕರೆ ಭೂಸ್ವಾಧೀನವಾಗಿದೆ. ಉಳಿದ 67.75 ಎಕರೆ ಭೂಸ್ವಾಧೀನ ಆಗಬೇಕಿದೆ, ನೀರು ಪೂರೈಸುವ ವಿಚಾರವಾಗಿ ಶಾಸಕರೊಂದಿಗೆ ಚರ್ಚೆಸಿದ್ದು 2025-26 ನೇ ಸಾಲಿನ ವರ್ಷಕ್ಕೆ ಈ ಯೋಜನೆ ಅನುಷ್ಠಾನಗೊಂಡು ಈ ಭಾಗದ ರೈತರ ಕೃಷಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಸಭೆ ಕರೆದಿದ್ದಾರೆ, ಇದೀಗ 97 ಫಲಾನುಭವಿಗಳ ದಾಖಲೆಗಳನ್ನು ಪಡೆದಿದ್ದೇವೆ. ಉಳಿದವರು ದಾಖಲೆ ನೀಡಬೇಕೆಂದು ಮನವಿ ಮಾಡಿದರು.

ಭೂಸ್ವಾಧೀನ ಪ್ರಕ್ರಿಯೆ ವಿಚಾರವಾಗಿ ರೈತ ದೇವರಾಜು ಮಾತನಾಡಿ, ಹಿಂದೆ ಸರ್ವೇ ನಡೆಸಿದ ರೀತಿಯಲ್ಲಿ ಕಾಲುವೆ ತೋಡಿಸಿಲ್ಲ,ಹಾಗಾಗಿ ನೈಜ ಫಲಾನು ಭವಿಗಳಿಗೆ ಪರಿಹಾರ ಸಿಗದಂತೆ ಆಗಿದೆ. ಆದ್ದರಿಂದ ಅಧಿಕಾರಿಗಳು ಪರಿಶೀಲಿಸಬೇಕು ರೈತರಿಗಿರುವ ಗೊಂದಲ ನಿವಾರಿಸಬೇಕು ಎಂದು ಕೋರಿದರು.

ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಶೇ.60 ರಷ್ಟು ಫಲಾನುಭವಿಗಳು ಬೆಂಗಳೂರಿನಲ್ಲಿದ್ದಾರೆ ಅವರಿಂದ ದಾಖಲೆ ಪಡೆದು ಜರೂರಾಗಿ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಭೂ ಸ್ವಾದಿನ ಇಲಾಖೆಯ ವ್ಯವಸ್ಥಾಪಕ ರವಿಚಂದ್ರ ಅವರು ಪರಿಹಾರ ನೀಡುವ ಪ್ರಕ್ರಿಯೆಯ ಮಾಹಿತಿ ನೀಡಿದರು.

ಸಭೆಯಲ್ಲಿ ಕಬಿನಿ ಇಲಾಖೆ ಎ.ಇ.ಇ ಈರಣ್ಣ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಕೊತ್ತನೂರು ಪಿಡಿಒ ಶಿವಕುಮಾರ್, ತೆಳ್ಳನೂರು ಪಿಡಿಒ ಶೋಭಾರಾಣಿ , ಸದಸ್ಯರಾದ ಚಿಕ್ಕದೊಡ್ಡಯ್ಯ, ಅರುಣೇಶ್, ರವಿ, ರಾಜಮ್ಮ ಮತ್ತಿತರು ಪಾಲ್ಗೊಂಡಿದ್ದರು.