ಹುಣಸೂರು: ಹುಣಸೂರು ತಾಲೂಕು ಹನುಗೋಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿ ಎರಡು ವರ್ಷಗಳಾಗಿದ್ದು ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ.
ಅದರಲ್ಲೂ ಹನಗೋಡು ಸರ್ಕಾರಿ ಆಸ್ಪತ್ರೆ ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳು ಪಕ್ಕದಲ್ಲೇ ಇದ್ದು ಇದಕ್ಕೆ ಹೊಂದಿಕೊಂಡಂತೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ.

ಆಸ್ಪತ್ರೆಗೆ ಬರುವ ರೋಗಿಗಳು, ಅವರ ಕಡೆಯವರು, ಗ್ರಾಮ ಪಂಚಾಯಿತಿಗೆ ಬರುವ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಈ ಘಟಕ ಆಸರೆಯಾಗಿತ್ತು.

ಸುಮಾರು ಐದು ಆರು ಲಕ್ಷ ಖರ್ಚು ಮಾಡಿ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಲ್ಲಿ ಸ್ಥಾಪಿಸಲಾಗಿದೆ. ಆದರೆ ಸ್ಥಾಪನೆಯಾದ ಆರು ತಿಂಗಳಲ್ಲೇ ಇದು ಕೆಲಸ ನಿರ್ವಹಿಸುತ್ತಿಲ್ಲ, ಕೆಟ್ಟು ಹೋಯಿತು. ಆದರೆ ರಿಪೇರಿ ಮಾಡಬೇಕಾದವರು ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿಯ ಪಿಡಿಒ ಗಳನ್ನು ಕೇಳಿದರೆ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಮಗೆ ನಿರ್ವಹಣೆ ಮಾಡಲು ಬಿಟ್ಟು ಕೊಟ್ಟಿಲ್ಲ ಎನ್ನುತ್ತಾರೆ,ಇಂಜಿನಿಯರ್ ಗಳನ್ನು ಕೇಳಿದರೆ ನಮಗೂ ಇದಕ್ಕೂ ಸಂಬಂಧವೇ ಎಂಬಂತೆ ಮಾತನಾಡುತ್ತಾರೆ ಎಂದು ಚಲುವರಾಜು ಹೇಳಿದ್ದಾರೆ.

ನೀರು ಸರಬರಾಜು ಮಂಡಳಿಯವರು ಈ ಘಟಕಗಳನ್ನು ಸ್ಥಾಪಿಸಿದ ಮೇಲೆ ಅದನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ಕೊಡಬೇಕಿತ್ತು, ಆದರೆ ಅವರು ಕೊಡಲಿಲ್ಲ ಇದರ ನಿರ್ವಹಣೆಯನ್ನೂ ಸರಿಯಾಗಿ ಮಾಡುತ್ತಿಲ್ಲ.
ಹನಗೋಡು ಹೋಬಳಿಯಲ್ಲಿ ಇನ್ನೂ ಹಲವು ಶುದ್ಧ ಕುಡಿಯುವ ನೀರಿನ ಘಟಕಗಳು ಹೀಗೆಯೇ ಕೆಟ್ಟು ಹೋಗಿವೆ.ಅಷ್ಟೇ ಅಲ್ಲಾ ಹುಣಸೂರು ತಾಲೂಕಿನಲ್ಲಿ ಸುಮಾರು 40 ರಿಂದ 50 ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಆದರೆ ಯಾರೊಬ್ಬರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಚಲುವರಾಜು ಆರೋಪಿಸಿದ್ದಾರೆ.
ಒಂದು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಐದರಿಂದ ಆರು ಲಕ್ಷ ವೆಚ್ಚವಾದರೆ ಇಂತಹ ಎಷ್ಟೋ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರ್ಕಾರ ಸ್ಥಾಪಿಸಲು ಲಕ್ಷಾಂತರ ಹಣ ನೀಡಿರುತ್ತದೆ. ಆದರೆ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.ಅಲ್ಲದೆ ರಿಪೇರಿ ಮಾಡಲೂ ಹಣ ನೀಡಲಾಗಿರುತ್ತದೆ, ಸರ್ಕಾರಕ್ಕೆ ನಷ್ಟ ಉಂಟು ಮಾಡುವುದು ಬಿಲ್ ಬರೆಸಿ ತಮ್ಮ ಜೇಬಿಗೆ ಹಣ ಬಿಡುವುದು ಅಧಿಕಾರಿಗಳ ಕಾಯಕವಾಗಿಬಿಟ್ಟಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ನೋಡಿಕೊಳ್ಳುವವರು ಯಾರು? ನೀರು ಸರಬರಾಜ ಮಂಡಳಿಯವರ ಸುಪರ್ದಿಯಲ್ಲಿದ್ದರೆ ಇವುಗಳನ್ನು ಸರಿಪಡಿಸಿ ಸಂಬಂಧಪಟ್ಟ ಇಂಜಿನಿಯರ್ ಗಳು ಸರಿಯಾಗಿ ಕೆಲಸ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು,ಇಲ್ಲಾ ಪಂಚಾಯಿತಿ ಸುಪರ್ದಿಗೆ ಬಿಟ್ಟು ಕೊಡಬೇಕು ಅವುಗಳ ನಿರ್ವಹಣೆಯನ್ನೂ ಅವರಿಗೆ ಬಿಡಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.
ಈ ಶುದ್ಧ ನೀರಿನ ಘಟಕಗಳನ್ನು ಕೆಲವು ಕಿಡಿಗೇಡಿಗಳು,ಕುಡುಕರು ಇನ್ನಷ್ಟು ಹಾಳು ಮಾಡಿದ್ದಾರೆ,ಕಸಕಡ್ಡಿ,ಬಾಟಲಿಗಳನ್ನು ಹಾಕಿ ಕಸದ ತೊಟ್ಟಿಯಂತೆ ಮಾಡಿದ್ದಾರೆ ಇದರ ಬಗ್ಗೆಯೂ ಸಂಬಂದಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಇನ್ನಾದರೂ ಈ ಶುದ್ಧ ಕುಡಿಯುವ ನೀರಿನ ಘಟಕಗಳು ಜನರ ನೀರಿನ ದಾಹ ನೀಗಿಸುವಂತೆ ಸಂಬಂಧಪಟ್ಟವರು ಮಾಡುತ್ತಾರಾ ಕಾದು ನೋಡಬೇಕಿದೆ.