ಬೆಂಗಳೂರು: ಹಂಪನಾ ಅವರು ಕೇವಲ ಸಾಹಿತ್ಯ ರಚನೆಗಾಗಿ ಸಾಹಿತಿಯಾದವರಲ್ಲ, ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು.
ಗಾಂಧಿ ಭವನದಲ್ಲಿ ನಡೆದ “ಹಂಪನಾ 90” ಸಾಹಿತ್ಯ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ,
ಹಂಪನಾ ಅವರು ಸಮಾಜಮುಖಿ ಆಗುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ,ಅವರು ಕನ್ನಡಿಗರ ಹೆಮ್ಮೆಯ ನಾಗರಾಜಯ್ಯ ಎಂದು ಕೊಂಡಾಡಿದರು.
ನಾಗರಾಜಯ್ಯ ಅವರ ಸಾಹಿತ್ಯ ಮತ್ತು ಬದುಕಿಗೆ ನಾನು ಸಾಕ್ಷಿ ಆಗಿರುವುದು ನನ್ನ ಜೀವನದ ಸೌಭಾಗ್ಯ,ಅವರ ಬದುಕು ಮತ್ತು ಬರಹ ಹಾಗೂ ಸಾರ್ಥಕತೆ ಇಡೀ ಸಮಾಜಕ್ಕೆ ಮಾರ್ಗದರ್ಶನ ಎಂದು ಸಿಎಂ ಹೇಳಿದರು.
ಸಾಹಿತ್ಯ ಕೃಷಿಯಲ್ಲಿ ಮಾತ್ರವಲ್ಲದೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ.ಅವರ ಕೆಲಸ ಕನ್ನಡ ಜಗತ್ತಿಗೆ ತಲುಪಿರುವುದು ಅತ್ಯಂತ ಮಹತ್ವದ ಸಂಗತಿ ಎಂದು ಸಿಎಂ ನುಡಿದರು.
ಭಾಷಾ ಶಾಸ್ತ್ರ, ಸಂಶೋಧನೆ, ಮಕ್ಕಳ ಸಾಹಿತ್ಯ, ವಿಮರ್ಷೆ ಸೇರಿ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಬೆರಗು ಮೂಡಿಸುವ ಕೆಲಸ ಮಾಡಿದ್ದಾರೆ,ಹಂಪನಾ ಅವರು ಒಳ್ಳೆ ವಾಗ್ಮಿ. ಅಧ್ಯಾಪಕರೂ ಆಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿದ್ದರು. ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ. ಆದರೂ ಸಾಹಿತ್ಯ ವಲಯದ ಒಡನಾಟ ಹೆಚ್ಚಾಗಿದ್ದು ನಾನು ಹಂಪನಾ ಅವರ ಅಭಿಮಾನಿ ಎಂದು ಸಿದ್ದರಾಮಯ್ಯ ಹೇಳಿದರು.
ಕಮಲಾ ಮತ್ತು ಹಂಪನಾ ಅವರು ಅದ್ಭುತ ದಂಪತಿ. ಇಬ್ಬರೂ ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡಿದವರು. ಇಬ್ಬರೂ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ ಮುಖ್ಯ ಮಂತ್ರಿಗಳು,ಹಂಪನಾ ಅವರು ಇನ್ನೂ ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕಲಿ ಎಂದು ಹಾರೈಸಿದರು.