ಹಳದಿ ಮೆಟ್ರೋ ಮಾರ್ಗ ತ್ವರಿತ ಗತಿಯಲ್ಲಿ ಸಾಗದಿರಲು ಬಿಜೆಪಿಗರೇ ಕಾರಣ ಎ ಎ ಪಿ

Spread the love

ಬೆಂಗಳೂರು: ಬೆಂಗಳೂರು ನಗರದಲ್ಲಿ ಮೆಟ್ರೋ ಹಳದಿ ಮಾರ್ಗದ ವಿಳಂಬಗತಿಗೆ ಈ ಹಿಂದೆ ರಾಜ್ಯವನ್ನಾಳಿದ್ದ ಹಾಗೂ ಈಗಿನ ಕೇಂದ್ರದ ಬಿಜೆಪಿ ಸರ್ಕಾರಗಳೇ ಕಾರಣ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಅಗತ್ಯ ಅನುಮತಿಗಳು, ಭೂ ಸ್ವಾಧೀನ ಪ್ರಕ್ರಿಯೆಗಳು ಹಾಗೂ ಬಹು ಮುಖ್ಯವಾಗಿ ಹೆಬ್ಬಗೋಡಿ ಡಿಪೋ ನಿರ್ಮಾಣದಲ್ಲಾದ ಅತಿ ವಿಳಂಬ ನೀತಿಯೇ ಪ್ರಮುಖ ಕಾರಣ ಎಂದು
ಆಮ್ ಆದ್ಮಿ ಪಕ್ಷದ ರಾಜ್ಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ದರ್ಶನ್ ಜೈನ್ ಕಿಡಿ ಕಾರಿದ್ದಾರೆ.

ಭಾರತದ ಸಂಸ್ಥೆಗಳ ಬದಲಾಗಿ ಚೀನಾದ ಸರ್ಕಾರಿ ಮಾಲೀಕತ್ವದ ಸಂಸ್ಥೆಗೆ ರೈಲು ಬೋಗಿಗಳ ನಿರ್ಮಾಣ ಗುತ್ತಿಗೆ ನೀರಿರುವುದು ಸಹ ವಿಳಂಬಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ ಎಂದು ದರ್ಶನ್ ಜೈನ್ ಆರೋಪಿಸಿದ್ದಾರೆ‌

ಹಳದಿ ಮಾರ್ಗದ ಅನುಮತಿ 2014 ರಲ್ಲಿ ಸಿಕ್ಕಿದ್ದರೂ, ಗುತ್ತಿಗೆ ಪ್ರಕ್ರಿಯೆ 2019 ರಲ್ಲಿ ಅಂದರೆ 5 ವರ್ಷಗಳಷ್ಟು ದೀರ್ಘಕಾಲದ ವಿಳಂಬದ ನಂತರ ಶುರುವಾಯಿತು. 2019 ರ ಡಿಸೆಂಬರ್ ನಲ್ಲಿ ರೈಲು ಬೋಗಿಗಳ ಗುತ್ತಿಗೆಯನ್ನು ಚೀನಾದ ಸಿ ಆರ್ ಸಿ ಸಿ ಗೆ ನೀಡಲಾಗಿತ್ತು. ಆ ವೇಳೆಗಾಗಲೆ ಕೋವಿಡ್ ಆವರಿಸಲಾರಂಭಿಸಿತ್ತು ಮತ್ತು ಭಾರತ ಚೀನಾ ಗಡಿ ವಿವಾದ ಶುರುವಾಗಿತ್ತು. ಈ ಗುತ್ತಿಗೆಯನ್ನು ರದ್ದು ಪಡಿಸಿ, 2020 ರ ಒಳಗಾಗಿಯೇ ಭಾರತದ ಬೆಮೆಲ್ ಅಥವಾ ಟೀಟಾಗರ್ ಸಂಸ್ಥೆಗೆ ನೇರ ಗುತ್ತಿಗೆ ನೀಡಬಹುದಿತ್ತು‌.ಈ ಸಂದರ್ಭದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿದ್ದರೂ ಯಾಕೆ ಈ ಕ್ರಮ ಕೈಗೊಳ್ಳಲಿಲ್ಲ ಇಂದು ದರ್ಶನ್ ಜೈನ್ ಪ್ರಶ್ನಿಸಿದ್ದಾರೆ.

ಹೆಬ್ಬಗೋಡಿಯ ಡಿಪೋ ಭೂ ಸ್ವಾಧೀನ ದೀರ್ಘ ವಿಳಂಬವಾಗಿ ಆಗುವಾಗಲೂ ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಜೆಪಿಯದ್ದೇ ಆಗಿದ್ದರೂ ಅಗತ್ಯ ಕ್ರಮ ಯಾಕೆ ಕೈಗೊಳ್ಳಲಿಲ್ಲ .ಬಹಳ ಹಿಂದಿನಿಂದಲೂ ನಮ್ಮ ಮೆಟ್ರೋ ಮತ್ತು ಕೇಂದ್ರ ಸರ್ಕಾರದ ಸಹಯೋಗ ಶಾಪಗ್ರಸ್ತ ರೀತಿಯಲ್ಲಿ ಕೆಟ್ಟಿದ್ದರೂ ಬೆಂಗಳೂರಿನವರೇ ಆದ ಅನಂತ್ ಕುಮಾರ್, ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್ ರಂತಹ ಬಿಜೆಪಿ ಮಂತ್ರಿಗಳು ಹಾಗೂ ಈಗಿನ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ರಂತಹ ಕೇಂದ್ರದ ನಾಯಕರುಗಳು ಸುಗಮ ಸಂವಹನ ಮತ್ತು ಅಗತ್ಯ ಅನುಮತಿಗಳ ವಿಳಂಬವನ್ನು ಯಾಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದರು.

ಇಂದು ನಮ್ಮ ಮೆಟ್ರೋದ ವಿಳಂಬ ನೀತಿಯ ವಿರುದ್ಧ ಜನಾಕ್ರೋಶ ಮೂಡಿಸುವ ಕೆಲಸ ಮಾಡುತ್ತಿರುವ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಇನ್ನಿತರ ನಾಯಕರುಗಳು ತಮ್ಮ ಕೈಲೇ ಅಧಿಕಾರವಿದ್ದೂ ತ್ರಿಬಲ್ ಇಂಜಿನ್ ಸರ್ಕಾರವಿದ್ದೂ ಮಾಡಬೇಕಾದ ಕೆಲಸಗಳನ್ನು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ ಎಂದು ದರ್ಶನ್ ಜೈನ್ ಹೇಳಿದ್ದಾರೆ.

ನಮ್ಮ ಮೆಟ್ರೋದ ಬಸವನಹುಳು ಮಾದರಿಯ ಕಾರ್ಯನಿರ್ವಹಣೆಯನ್ನೂ ಮತ್ತು ರಾಜ್ಯ , ಕೇಂದ್ರ ಸರ್ಕಾರಗಳ ಜನವಿರೋಧಿ, ಬೇಜವಾಬ್ದಾರಿ ನೀತಿಗಳನ್ನೂ ಆಮ್ ಆದ್ಮಿ ಪಾರ್ಟಿ ಖಂಡಿಸುತ್ತದೆ ಎಂದಿದ್ದಾರೆ.

ಬೆಂಗಳೂರಿನ ಸುಗಮ ಸಂಚಾರ ನಿರ್ವಹಣೆಗೆ ಅತ್ಯಂತ ಅಗತ್ಯವಿರುವ ನಮ್ಮ ಮೆಟ್ರೋ ಮತ್ತು ಸಬ್ ಅರ್ಬನ್ ರೈಲು ಕಾಮಗಾರಿಗಳ ತೀವ್ರ ವಿಳಂಬವನ್ನೂ ಖಂಡಿಸುತ್ತದೆ.

ಆಮ್ ಆದ್ಮಿ ಪಕ್ಷವು ಬೆಂಗಳೂರಿನ ಎಲ್ಲಾ ಮೆಟ್ರೋ ಕಾಮಗಾರಿಗಳು ಮತ್ತು ಸಬ್ ಅರ್ಬನ್ ರೈಲು ಕಾಮಗಾರಿಗಳ ಪರಿಶೀಲನೆ ಮಾಡಿ ಜನರ ಮುಂದೆ ಸತ್ಯ ತೆರೆದಿಡುವ ಕೆಲಸ ಮಾಡಲಿದೆ ಎಂದು ದರ್ಶನ್ ಜೈನ್ ತಿಳಿಸಿದ್ದಾರೆ.