ಹೆಚ್ ಡಿ ಕೆ ಕುಟುಂಬದ ಜಮೀನಿನಲ್ಲಿ ಒತ್ತುವರಿ ತೆರವು ಕಾರ್ಯ ಪ್ರಾರಂಭ

Spread the love

ರಾಮನಗರ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ್ದ ಕೇತಗಾನಹಳ್ಳಿ ಜಮೀನಿನಲ್ಲಿ ಒತ್ತುವರಿ ಭೂಮಿ ತೆರವು ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ.

ಬಿಡದಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯಿಂದ ಜಂಟಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇಂದು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಮಾಡುತ್ತಿದೆ.

ಸ್ಥಳಕ್ಕೆ ಡಿಸಿ ಯಶವಂತ್ ವಿ ಗುರುಕರ್, ಎಎಸ್‍ಪಿ ಸುರೇಶ್, ಎಎಸ್‍ಪಿ ರಾಮಚಂದ್ರಯ್ಯ ಭೇಟಿ ನೀಡಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಹಿಂದೆ ನನ್ನನ್ನು ಟಾರ್ಗೆಟ್ ಮಾಡಲು ಸರ್ಕಾರ ಒತ್ತುವರಿ ಆರೋಪ ಮಾಡುತ್ತಿದೆ. ಯಾವುದೇ ತನಿಖೆಗೆ ನಾನು ಸಿದ್ಧ. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ‌ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.