ಪಲನ್ಪುರ್ (ಗುಜರಾತ್): ಗುಜರಾತ್ನ ಬನಸ್ಕಾಂತ ಜಿಲ್ಲೆಯ ಬನಸ್ಕಾಂತದ ದೀಸಾ ನಗರದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟವಾಗಿ ಸುಮಾರು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ದೀಸಾ ನಗರದಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಈ ಸ್ಪೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಕಟ್ಟಡದ ಮೇಲ್ಚಾವಣಿ ಕುಸಿದಿದೆ. ಹಾಗಾಗಿ ಅನೇಕ ಮಂದಿ ಇದರ ಅಡಿ ಸಿಲುಕಿದ್ದಾರೆ ಎಂದು ದೀಸಾ ಉಪವಿಭಾಗೀಯ ಮ್ಯಾಜಿಸ್ಟ್ರೇಟರ್ ನೆಹಾ ಪಂಚಲ್ ತಿಳಿಸಿದ್ದಾರೆ.
ಮಾಹಿತಿ ತಿಳಿದು, ಬನಸ್ಕಾಂತ ಜಿಲ್ಲಾಧಿಕಾರಿ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸ್ಥಳದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಅನೇಕ ಕಾರ್ಮಿಕರ ದೇಹದ ಭಾಗಗಳು ಚದುರಿಹೋಗಿವೆ. ಅಲ್ಲದೆ, ಗೋದಾಮಿನ ಅವಶೇಷಗಳು 200 ಮೀಟರ್ ದೂರದವರೆಗೆ ಹೋಗಿಬಿದ್ದಿವೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸ್ಫೋಟಕ್ಕೆ ಕಾರಣವೇನೆಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದ ಬಡ ಕಾರ್ಮಿಕರ ಕುಟುಂಬಗಳು ಶೋಕಸಾಗರದಲ್ಲಿ ಮುಳುಗಿವೆ.