ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ)ಯು ಬೆಂಗಳೂರು ನಗರ ಆಡಳಿತವನ್ನು ಬಲಪಡಿಸಲು ಮತ್ತು ನಗರದ ಸಮಗ್ರ ಬದಲಾವಣೆಗೆ ಚಾಲನೆ ನೀಡುವ ಮುನ್ನುಡಿ ಬರೆದಿದೆ.
ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್), ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಸಹಯೋಗದೊಂದಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ – ನಮ್ಮ ಬೆಂಗಳೂರಿನ ಉತ್ತಮ ಆಡಳಿತಕ್ಕೆ ಮಾರ್ಗ ಎಂಬ ಶೀರ್ಷಿಕೆಯಡಿ ಒಂದು ದಿನದ ಸಮಾವೇಶವನ್ನು ಆಯೋಜಿಸಿತ್ತು.
ಈ ಸಮಾವೇಶವು ಶಾಸಕರು, ಹಿರಿಯ ಆಡಳಿತಗಾರರು, ನಗರ ಯೋಜಕರು, ನೀತಿ ತಜ್ಞರು ಮತ್ತು ನಾಗರಿಕರನ್ನು ಒಟ್ಟುಗೂಡಿಸಿ, ಬೆಂಗಳೂರಿನ ಆಡಳಿತ ಮಾದರಿಯನ್ನು ಮರುಕಲ್ಪನೆ ಮಾಡಲು ಮತ್ತು ಹೆಚ್ಚು ಸಮರ್ಥನೀಯವಾದ, ಕಾರ್ಯಕ್ರಮ, ನಾಗರಿಕ ಕೇಂದ್ರಿತ ನಗರಕ್ಕೆ ರೂಪರೇಷೆ ರೂಪಿಸಲು ವೇದಿಕೆಯನ್ನು ಒದಗಿಸಿತು.
ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್, ಜಿಬಿಎ ಚೌಕಟ್ಟಿನಡಿ ಕರ್ನಾಟಕ ಸರ್ಕಾರದ ಏಕೀಕೃತ ಮತ್ತು ಕಾರ್ಯಕ್ಷಮ ಆಡಳಿತ ರಚನೆಯ ದೃಷ್ಟಿಕೋನವನ್ನು ತಿಳಿಸಿದರು.
ಹಿರಿಯ ಪತ್ರಕರ್ತೆ ಮಾಯಾ ಶರ್ಮಾ ಅವರೊಂದಿಗಿನ ಸಂವಾದದಲ್ಲಿ ಸರ್ಕಾರದ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ, ಸಂಚಾರ ಮತ್ತು ಸೇವಾ ಸುಧಾರಣೆಗಳ ಬದ್ಧತೆಯ ಕುರಿತು ಪುನರುಚ್ಚರಿಸಿದರು.
ನಾವು ಹೆಚ್ಚುವರಿ ವಾರ್ಡ್ ಸೇರಿಸಿ 369 ವಾರ್ಡ್‌ಗಳನ್ನಾಗಿ ಮಾಡುತ್ತೇವೆ, 104 ಕಿ.ಮೀ ಬೆಂಗಳೂರು ವ್ಯಾಪಾರ ಕಾರಿಡಾರ್ ಕಾಮಗಾರಿಗೆ ವೇಗವನ್ನು ಹೆಚ್ಚಿಸಲಾಗುತ್ತದೆ. ಪ್ರಸ್ತಾವಿತ ಎಲಿವೇಟೆಡ್ ಕಾರಿಡಾರ್‌ಗಳು, ಸುರಂಗಗಳು ಮತ್ತು ನಗರದಾದ್ಯಂತ ರಸ್ತೆ ಯೋಜನೆಗಳು ಸಂಚಾರವನ್ನು ಸುಗಮಗೊಳಿಸುತ್ತವೆ ಎಂದು ತಿಳಿಸಿದರು.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ರವಿಚಂದ್ರನ್ ವಿ, ಬ್ರಾಂಡ್ ಬೆಂಗಳೂರು ಸಮಿತಿ ಸದಸ್ಯ, ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತೆ ನಿತ್ಯ ಮಂದ್ಯಂ ಅವರೊಂದಿಗೆ ಈ ಬಿಲ್‌ನ ಕಾನೂನಾತ್ಮಕ ಉದ್ದೇಶ ಮತ್ತು ನಾಗರಿಕರ ಮೇಲಿನ ಪರಿಣಾಮವನ್ನು ಕುರಿತು ಚರ್ಚಿಸಲಾಯಿತು.
ಈ ವೇಳೆ ರಿಜ್ವಾನ್ ಅರ್ಷದ್ ನಾಗರಿಕ ಕೇಂದ್ರಿತ ನಗರಕ್ಕೆ ವಿಕೇಂದ್ರೀಕರಣದ ಮಹತ್ವವನ್ನು ಒತ್ತಿ ಹೇಳಿದರು.
ಬೆಂಗಳೂರು ಮುನ್ಸಿಪಾಲಿಟಿಯು ನಾಗರಿಕ ಕೇಂದ್ರಿತವಾಗಿರಬೇಕಾದರೆ, ಅದು ವಿಕೇಂದ್ರೀಕೃತವಾಗಿರಬೇಕು. ಬೆಂಗಳೂರಿನ ಪ್ರತಿಯೊಂದು ಭಾಗವೂ ವಿಭಿನ್ನ ಸಮಸ್ಯೆಯನ್ನು ಹೊಂದಿದೆ. ಆಡಳಿತವು ಜನರಿಗೆ ಸಮೀಪವಾಗಿರಬೇಕು. ಆಡಳಿತವನ್ನು ಹತ್ತಿರವಾಗಿ ಮತ್ತು ಹೆಚ್ಚು ಜವಾಬ್ದಾರಿಯುತವಾಗಿಸಲು ನಾವು ಹೆಚ್ಚು ಕಾರ್ಪೊರೇಷನ್‌ಗಳನ್ನು ರಚಿಸಿದ್ದೇವೆ ಎಂದು ಹೇಳಿದರು.
ಮಹೇಶ್ವರ ರಾವ್. ಎಂ, ಐಎಎಸ್, ಮುಖ್ಯ ಆಯುಕ್ತ, ಜಿಬಿಎ; ಡಾ. ರವಿಶಂಕರ್ ಜೆ, ಐಎಎಸ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್, ಕಾರೀ ಗೌಡ, ಸಿಇಒ, ಬಿಎಸ್‌ಡಬ್ಲ್ಯೂಎಂಎಲ್; ಡಾ. ಅನೂಪ್ ಶೆಟ್ಟಿ, ಡಿಸಿಪಿ ವೆಸ್ಟ್; ಡಾ. ರಾಜೇಂದ್ರ ಕೆವಿ, ಕಮಿಷನರ್ ವೆಸ್ಟ್ ಸಿಟಿ ಕಾರ್ಪೊರೇಷನ್; ಪ್ರಭಾಕರ್ ಮತ್ತಿತರರು ಮಾತನಾಡಿದರು.
ರೇವತಿ ಅಶೋಕ್ ಅವರು ಜಿಬಿಎಯಲ್ಲಿ ಕ್ರಿಯಾತ್ಮಕತೆ ಕುರಿತು ಒಂದು ಅಧ್ಯಾಯವಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಆರೋಗ್ಯ, ಶಿಕ್ಷಣ, ಬಡತನ ನಿವಾರಣೆ, ಸಾಮಾಜಿಕ ನ್ಯಾಯ, ತ್ಯಾಜ್ಯ ನಿರ್ವಹಣೆ ಇತ್ಯಾದಿಗಳಿಗೆ ನಿರ್ದಿಷ್ಟ ಅಧ್ಯಾಯಗಳಿವೆ. ಸಂಚಾರವನ್ನು ಬಲಪಡಿಸಲು ಜಿಬಿಎ ಹೇಗೆ ಖಚಿತಪಡಿಸುತ್ತದೆ ಎಂದು ಪ್ರಶ್ನಿಸಿದರು.
ಅದಕ್ಕೆ ಮಹೇಶ್ವರ ರಾವ್ ಉತ್ತರಿಸಿ, ನಗರದಲ್ಲಿ ಸಂಚಾರ ಸಮಸ್ಯೆ ಇರುವುದನ್ನು ಒಪ್ಪಿಕೊಂಡರು. ಪಾದಚಾರಿಗಳಿಗೆ ಉತ್ತಮ ಗುಣಮಟ್ಟದ ನಡಿಗೆಯನ್ನು ಒದಗಿಸಲು ಫುಟ್‌ಪಾತ್‌ಗಳನ್ನು ಸುಧಾರಿಸುವುದು, ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ಸಕ್ರಿಯ ಚಲನಶೀಲತೆಯನ್ನು ಉತ್ತೇಜಿಸುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ರಸ್ತೆಬದಿಯಲ್ಲಿ ದೊಡ್ಡ ಪ್ರಮಾಣದ ಕಸ, ಶಿಥಿಲಗಳು, ಸೋಫಾ ಸೆಟ್‌ಗಳು ಮತ್ತು ಸ್ಯಾನಿಟರಿ ವೇರ್‌ನಂತಹ ತ್ಯಜಿಸಲಾದ ವಸ್ತುಗಳ ಕುರಿತು ಕೇಳಿದ ಪ್ರಶ್ನೆಗೆ ಕಾರೀಗೌಡ ಉತ್ತರಿಸಿ ನಗರದಾದ್ಯಂತ ಶೀಘ್ರದಲ್ಲೇ ಇಂತಹ ತ್ಯಜಿಸಲಾದ ವಸ್ತುಗಳಿಗಾಗಿ ಸಾಪ್ತಾಹಿಕ ಸಂಗ್ರಹ ಡ್ರೈವ್ ಆಯೋಜಿಸಲಾಗುವುದು ಎಂದು ತಿಳಿಸಿದರು.