ಬೂದುನೀರು ನಿರ್ವಹಣಾ ಕಾಮಗಾರಿಗೆ ಕೃಷ್ಣಮೂರ್ತಿ ಚಾಲನೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಸುಮಾರು 2.8 ಕೋಟಿ ರೂ. ವೆಚ್ಚದಲ್ಲಿ ಬೂದುನೀರು ನಿರ್ವಹಣಾ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ಬೂದುನೀರು ನಿರ್ವಹಣಾ ಯೋಜನೆಗೆ ಕುಣಗಳ್ಳಿ ಗ್ರಾಮ ಆಯ್ಕೆಯಾಗಿದ್ದು,ನರೇಗಾ & ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.

ಈ ಯೋಜನೆಯಿಂದ ಗ್ರಾಮದ ಮನೆ ಮನೆಯಿಂದ ಹೊರಹೊಮ್ಮುವ ನೀರು ಒಂದೆಡೆ ನಿಂತು ಬೂದು ಬಣ್ಣಕ್ಕೆ ತಿರುಗುತ್ತದೆ. ಈ ಎಲ್ಲಾ ನಿರುಪಯುಕ್ತ ನೀರನ್ನು ಒಂದು ಸೋಪ್ ಫಿಟ್ ಮಾಡಿ ಅಲ್ಲಿ ಒಂದೆಡೆ ಶೇಖರಣೆ ಮಾಡಿ ಅಲ್ಲಿ ತಿಳಿಯಾದ ನೀರನ್ನು ಮುಂದೆ ಹೋಗಿ ವೆಟ್ ಲ್ಯಾಂಡ್ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಶುದ್ಧವಾದ ನೀರನ್ನು ಕೃಷಿ ಚಟುವಟಿಕೆಗಳಿಗೆ ಮರುಬಳಕೆ ಮಾಡಲಾಗುವುದು ಹಾಗೂ ಉಳಿದ ನೀರು ಹಳ್ಳ ಸೇರುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಇದಕ್ಕಾಗಿ ಗ್ರಾಮದಲ್ಲಿ 28 ಚರಂಡಿಗಳನ್ನು ತೆಗೆದುಕೊಂಡಿದ್ದು 2 ಸೆಪ್ಟಿಕ್ ಟ್ಯಾಂಕ್ ಗಳು ಹಾಗೂ 2 ವೆಟ್ ಲ್ಯಾಂಡ್ ಗಳನ್ನು ಆಯ್ಕೆ ಮಾಡಿ ಕೊಂಡಿದ್ದೇವೆ. 2 ಕಡೆ ನೀರು ಶೇಖರಣ ಘಟಕಗಳನ್ನು ನಿರ್ಮಿಸಲಾಗುವುದು ಇಲ್ಲಿ ಬೂದು ನೀರನ್ನು ಸಂಸ್ಕರಣೆ ಮಾಡಿ ಮರುಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಎಲ್ಲೂ ಕೊಳಚೆ ನೀರು ನಿಲ್ಲ ಬಾರದು,ಇದರಿಂದ ಸೊಳ್ಳೆಗಳ ನಿಯಂತ್ರಣವಾಗಲಿದೆ. ನೀರು ನಿಂತು ಎಲ್ಲಿಯೂ ತೊಂದರೆ ಯಾಗದ ಹಾಗೆ ಯೋಜನಾ ವರದಿ ತಯಾರಿಸಲಾಗಿದೆ. ನಾಳೆಯಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ಎಸ್‌.ಬಿ.ಎಂ ಯೋಜನೆಯಡಿ 9 ಕಾಮಗಾರಿಗಳನ್ನು ಗ್ರಾಮದಲ್ಲಿ ಕೈಗೊಳ್ಳಲಾಗಿದ್ದು ಕಾಮಗಾರಿಗಳಿಗೆ 31.47 ಲಕ್ಷ ರೂಗಳನ್ನು ಬಳಸಿಕೊಳ್ಳಲಾಗುವುದು ಈ ಹಿಂದೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡುಬಂದಿದ್ದು ಹರಿಯುವ ಚರಂಡಿ ನೀರಿಗೆ ಅಲ್ಲಲ್ಲಿ ಕಟ್ಟೆ ಕಟ್ಟಿ ತಿಳಿನೀರು ಹರಿಯುವಂತೆ ಮಾಡುವುದು ಕಲುಷಿತ ನೀರನ್ನು ತಿಳಿ ನೀರನ್ನಾಗಿ ಮಾಡಿ ಶುದ್ಧಗೊಳಿಸಲಾಗುವುದು ಎಂದು ಹೇಳಿದರು.

ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಗುರಿ ಹೊಂದಿದ್ದು ಜೆಜೆಎಂ ಯೋಜನೆಯಿಂದ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ದೊರಕಿದೆ,ಎಸ್‌.ಬಿ.ಎಂ ನಿಂದ ಶೌಚಾಲಯ ದೊರಕಿದೆ ಅದೇ ರೀತಿ ಈ ಯೋಜನೆಯಿಂದ ಬೂದುನೀರು ತಿಳಿಯಾಗಿ, ಶುದ್ಧವಾಗಿ ಹೊರಹೊಮ್ಮಿ ಕೃಷಿ ಚಟುವಟಿಕೆಗಳಿಗೆ ಮರುಬಳಕೆಯಾಗಲಿದೆ ಎಂದು ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.

ಗ್ರಾಮವನ್ನು ಬಯಲು ಮುಕ್ತ ಶೌಚ ಗ್ರಾಮ ಮಾಡಲು ಹೊರಟಿದ್ದು ಇದರಿಂದ ಗ್ರಾಮಕ್ಕೆ ಪ್ರಶಸ್ತಿ ಲಭಿಸಲಿದೆ. ಹಾಗೂ ಗ್ರಾಮದ ಜನತೆಯ ನಡವಳಿಕೆ ಬದಲಾಗಲಿದೆ ನಾವು ಉಪಯೋಗಿಸುವ ಶೇ 75 ರಷ್ಟು ನೀರು ಬೂದುನೀರಾಗಿದೆ. ನಿರುಪಯುಕ್ತ ಬೂದುನೀರನ್ನು ಮರುಬಳಕೆ ಮಾಡುವಂತೆ ಮಾಡಿದರೆ ಗ್ರಾಮದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಕುಂತೂರು ರಾಜೇಂದ್ರ, ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷ ಪ್ರಭುಸ್ವಾಮಿ, ಸದಸ್ಯರಾದ ಚಂದ್ರಶೇಖರ್, ಲಿಂಗರಾಜು, ಜಿ.ಪಂ ತಾಂತ್ರಿಕ ಉಪವಿಭಾಗದ ಎ.ಇ.ಇ. ಶಿವಪ್ರಕಾಶ್, ಜೆ.ಇ. ಮಂಜು, ತಾ.ಪಂ ಇ.ಒ ಗುರುಶಾಂತಪ್ಪ ಬೆಳ್ಳುಂಡಗಿ, ಪಿಡಿಒ ಚನ್ನೇಶ್ ಹಾಗೂ ಮುಖಂಡರುಗಳಾದ ಶೀನಿವಾಸಮೂರ್ತಿ, ರಾಜೂಗೌಡ ಮತ್ತಿತರರು ಹಾಜರಿದ್ದರು.