ಗುಂಟೂರು: ಗ್ರಾನೈಟ್ ಕ್ವಾರಿಯಲ್ಲಿ ಬಂಡೆಗಳು ಕುಸಿದು ಬಿದ್ದು ಆರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಆಂದ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಬಳ್ಳಿಕುರವ ಬಳಿ ಭಾನುವಾರ ನಡೆದ
ಈ ಅವಘಡದಲ್ಲಿ 10 ಮಂದಿ ಗಾಯಗೊಂಡಿದ್ದಾರೆ.
ಬಂಡೆಗಳು ಉರುಳಿದ ಸಂದರ್ಭದಲ್ಲಿ 16 ಕಾರ್ಮಿಕರು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಮೃತರನ್ನು ಒಡಿಶಾ ಮೂಲದ ವಲಸೆ ಕಾರ್ಮಿಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡವರನ್ನು ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಅವರಲ್ಲಿ ನಾಲ್ವರು ಚಿಂತಾಜನಕವಾಗಿದ್ದಾರೆ.
ಕ್ವಾರಿ ನಿರ್ವಹಣೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸುವಲ್ಲಿ ವಿಫಲವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಬಾಪಟ್ಲಾ ಜಿಲ್ಲಾಧಿಕಾರಿ ಜೆ. ವೆಂಕಟ ಮುರಳಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದುಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಘಟನೆಯ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಗಾಯಾಳುಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವಂತೆ ಸೂಚಿಸಿದ್ದಾರೆ.