ಬೆಳಗಾವಿ: ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಸಾರ್ವಜನಿಕವಾಗಿ
ಗಾಳಿಯಲ್ಲಿ ಗುಂಡು ಹಾರಿಸಿ, ಚಾಕು ತೋರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಈಗ ಕಂಬಿ ಎಣಿಸುವಂತಾಗಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಕುಡುಚಿ ಪಟ್ಟಣದ ಗ್ರಾಮೀಣ ಗ್ರಾಮ ಪಂಚಾಯತ್ ಸದಸ್ಯ ಈ ರೀತಿ ಗೂಂಡಾ ವರ್ತನೆ ತೋರಿದ್ದು ಅರೆಸ್ಟ್ ಆಗಿದ್ದಾರೆ.
ಆತ ಆಚರಿಸಿಕೊಂಡ ಹುಟ್ಟುಹಬ್ಬದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಬಾಜಾನ್ ಖಾಲಿಮುಂಡಾಸೈ ಎಂಬಾತ ನಡುರಸ್ತೆಯಲ್ಲಿ ಗಾಳಿಯಲ್ಲಿ ಗುಂಡು ಹೊಡೆದು, ಕೈಯಲ್ಲಿ ಚಾಕು ಹಿಡಿದು ಗೂಂಡಾ ವರ್ತನೆ ತೋರಿ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಿದ್ದಾನೆ.
ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಇದ್ದರೂ ಯಾವುದೇ ಭಯವಿಲ್ಲದೇ ಈತ ಹುಚ್ಚಾಟ ಮೆರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಎಚ್ಚೆತ್ತ ಸ್ಥಳೀಯ ಪೊಲೀಸರು ಬಾಬುಜಾನ್ ನನ್ನು ಬಂಧಿಸಿದ್ದಾರೆ,ಕುಡುಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.