ಮೈಸೂರು: ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ ಮನೆಯಲ್ಲಿ ಕಿಡಿಗೇಡಿಗಳು ನುಗ್ಗಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ.
ಬಾಗಿಲು ಮುರಿದ ಖದೀಮರು 14 ವರ್ಷಗಳ ಹಿಂದೆ ಸೀಜ್ ಮಾಡಲಾಗಿದ್ದ ಗ್ರೀನ್ ಬಡ್ಸ್ ಆಗ್ರೋ ಫಾರಂ ಪ್ರೈ.ಲಿ.ಗೆ ಸೇರಿದ ಮನೆಯಲ್ಲಿ ನುಗ್ಗಿ ಈ ಕೃತ್ಯ ಎಸಗಿದ್ದಾರೆ.
ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿ ಮಾಡಿರುವ ಕಿಡಿಗೇಡಿಗಳು ಯಾವುದೋ ಮುಖ್ಯವಾದ ಪದಾರ್ಥ ದೋಚಲು ಯತ್ನಿಸಿದ್ದಾರೆ.
ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದಲ್ಲಿ ಗ್ರೀನ್ ಬಡ್ಸ್ ಆಗ್ರೋ ಪ್ರೈ ಲಿ.ಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ.
ಮನೆಯಲ್ಲಿರುವ ಚರಾಸ್ಥಿಗಳನ್ನ ಸ್ಥಳಾಂತರಿಸುವ ಉದ್ದೇಶದಿಂದ ತಹಸೀಲ್ದಾರ್ ಶಿರೀನ್ ತಾಜ್,ಕಾನೂನು ಅಧಿಕಾರಿ ರಕ್ಷಿತ್ ಹಾಗೂ ರಾಜಸ್ವ ನಿರೀಕ್ಷಕರಾದ ಹೇಮಂತ್ ಕುಮಾರ್ ಸೀಜ್ ಆದ ಮನೆಗೆ ಭೇಟಿ ಕೊಟ್ಟಿದ್ದಾರೆ.
ಸೀಜ್ ಮಾಡಿದ ಬಾಗಿಲು ತೆಗೆಯಲು ಸಾಧ್ಯವಾಗದೆ ಹಿಂಬದಿ ಸೀಜ್ ಮಾಡದಿರುವ ಬಾಗಿಲ ಬಳಿ ಹೋದಾಗ ಅದು ತೆರೆದಿರುವುದು ಕಂಡು ಚಿಕಿತರಾಗಿದ್ದಾರೆ.
ದುಷ್ಕರ್ಮಿಗಳು ಬಾಗಿಲು ಒಡೆದು ಒಳ ನುಗ್ಗಿರುವುದು ಗೊತ್ತಾಗಿ ಅಧಿಕಾರಿಗಳು ತಕ್ಷಣ ಆಲನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳದ್ದು.ಪೊಲೀಸರ ಮಾಹಿತಿ ಪ್ರಕಾರ ಸೀಜ್ ಆಗಿದ್ದ ಮನೆಗೆ ಯಾವುದೇ ಭದ್ರತೆ ಒದಗಿಸಿರಲಿಲ್ಲ.ಇದನ್ನೇ ಬಳಸಿಕೊಂಡ ದುಷ್ಕರ್ಮಿಗಳು ಬಾಗಿಲು ಮುರಿದು ಮನೆಯಲ್ಲಿದ್ದ ವಸ್ತುಗಳನ್ನು ಜಾಲಾಡಿದ್ದಾರೆ.