ಸರ್ಕಾರ ಕನ್ನಡ ಜಾನಪದ ಪರಿಷತ್ತಿಗೆಅನುದಾನ ನೀಡಲಿ -ಡಾ.ಸಿ.ಸೋಮಶೇಖರ್

Spread the love

ಬೆಂಗಳೂರು: ಕನ್ನಡ ಜಾನಪದ ಪರಿಷತ್ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು,ಸರ್ಕಾರ ಈ ಪರಿಷತ್ತಿಗೆ ಅನುದಾನ ನೀಡಬೇಕೆಂದು ರಾಜ್ಯ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಸಲಹೆ ನೀಡಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಜಾನಪದ ಪರಿಷತ್, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಘಟಕ ಆಯೋಜಿಸಿದ್ದ ರಾಜ್ಯ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯ, ಕಲೆಗೆ ವಿಶೇಷ ಆದ್ಯತೆ ನೀಡಿ ಅವುಗಳನ್ನು ಮುಖ್ಯ ವಾಹಿನಿಗೆ ತರುವ ಕಾಯಕವನ್ನು ಜನಪದ ಪರಿಷತ್ ಮಾಡುತ್ತಿದೆ. ಈ ದಿಸೆಯಲ್ಲಿ ಸರ್ಕಾರವು ಇಂತಹ ಸಂಘಟನೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಜಾನಪದ ಸಾಹಿತ್ಯ ಸಂಸ್ಕೃತಿಯ ಸಂರಕ್ಷಣೆ, ಸಾಮಾಜಿಕ ಸಾಂಸ್ಕೃತಿಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಜಾನಪದ ಎಸ್. ಬಾಲಾಜಿ ಅವರ ಕಾರ್ಯವನ್ನು ಸೋಮಶೇಖರ್ ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಅವರು, “ಜಾನಪದ ಅಲಿಖಿತ ಸಂವಿಧಾನ. ಅದಕ್ಕೆ ಯಾವತ್ತಿಗೂ ಸಾವಿಲ್ಲ. ಪ್ರತಿ ಕಾಲಘಟ್ಟದಲ್ಲೂ ಅದು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ರಾಜ್ಯ ಸಮ್ಮೇಳನವು ಇತಿಹಾಸದ ಪುಟಗಳನ್ನು ಸೇರಿಕೊಳ್ಳುತ್ತದೆ. ೧೯೬೭ ರ ರಾಜ್ಯ ಸಮ್ಮೇಳನ ಬಿಟ್ಟರೆ ಈ ಸಮ್ಮೇಳನವೇ ಇಷ್ಟು ಅರ್ಥಗರ್ಭಿತವಾಗಿ, ವಿಜೃಂಭಣೆಯಿಂದ ಜರುಗುತ್ತಿರುವುದು” ಎಂದು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಡಾ.ರಿಯಾಜ್ ಪಾಷ ಅವರು ಮಾತನಾಡಿ, ಕನ್ನಡ ಜಾನಪದ ಪರಿಷತ್ ಅಗಾಧವಾಗಿ ಬೆಳೆಯುತ್ತಿದೆ. ಅದು ಆಧುನೀಕರಣದ ಭರಾಟೆಯಲ್ಲಿ ಸಿಕ್ಕಿ ಮೂಲ ಸಂಸ್ಕೃತಿಯನ್ನು ಮರೆಯುತ್ತಿರುವ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿ, ಜನಪದಗೀತೆ, ಸಾಹಿತ್ಯ ಯುವಜನತೆಗೆ ತಲುಪಿಸುವ ಕಾರ್ಯ ಆಗಬೇಕಿದೆ. ಜಾನಪದ ಎಲ್ಲದರ ಮೂಲ” ಎಂದು ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ವಾಸ್ತವಕ್ಕೆ ದೂರವಾದ ಕಾರ್ಯಕ್ರಮಗಳನ್ನು ರಿಯಾಲಿಟಿ ಶೋ ಎನ್ನುತ್ತಿದ್ದೇವೆ. ಇದು ಭಯ ಹುಟ್ಟಿಸುತ್ತದೆ. ಮಣ್ಣಿನ ವಾಸನೆ, ಮಾನವೀಯ ಸಂಬಂಧಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು ಎಂದು ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಖ್ಯಾತ ನಟ
ಚೇತನ್ ಅಹಿಂಸಾ ಮಾತಾಡಿ “ಪ್ರತಿರೋಧವೇ ಸಮಸಮಾಜದ ನಿರ್ಮಾಣಕ್ಕೆ ಬುನಾದಿ. ಜಾನಪದ ಜೀವನ ಮೌಲ್ಯವನ್ನು ಪ್ರತಿಪಾದಿಸುತ್ತದೆ’ ಎಂದು ತಿಳಿಸಿದರು.

ಬೆಳಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ನಾಡಿನ ಬೇರೆಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಕಲಾತಂಡಗಳು ಭಾಗವಹಿಸಿದ್ದವು.

ಉದ್ಘಾಟನಾ ಸಮಾರಂಭದಲ್ಲಿ ‘ಸೋಬಾನ’ ಸಮ್ಮೇಳನದ ಸ್ಮರಣ ಸಂಚಿಕೆ, ‘ಜಲಜಾನಪದ’ ಜಾನಪದ ನೂರೊಂದು’ ‘ಜಾನಪದ ಬಂಡಿ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ನೂರು ಯುವಕರಿಗೆ “ಯುವ ನಿಧಿ” ಪ್ರಶಸ್ತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಲಾ ಇಪ್ಪತ್ತು ಜನರಿಗೆ ಜೀ.ಶಂ.ಪ, ಮಧುರಚೆನ್ನ, ಕರೀಂ ಖಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಐವತ್ತು ಕಲಾವಿದರಿಗೆ ಜಾನಪದ ಗೌರವ ಪ್ರಶಸ್ತಿ ನೀಡಲಾಯಿತು. ಮಹಿಳಾ ಜಾನಪದ ಗೋಷ್ಠಿ ಒಳಗೊಂಡಂತೆ ಎರಡು ಜಾನಪದ ಗೋಷ್ಠಿಗಳು ಜರುಗಿದವು. ನಾಡಿನ ಹೆಸರಾಂತ ವಿದ್ವಾಂಸರು ಇದರಲ್ಲಿ ತಮ್ಮ ಪತ್ರಿಕೆ ಮಂಡಿಸಿದರು.

ಈ ಸಮ್ಮೇಳನದಲ್ಲಿ ಖ್ಯಾತ ಗಾಯಕರಾದ ಶ್ರೀ ಗುರುರಾಜ ಹೊಸಕೋಟೆ, ಜೋಗಿಲ ಸಿದ್ಧರಾಜು, ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಡಾ.ಗೋವಿಂದಸ್ವಾಮಿ, ಶ್ರೀ ಸಿದ್ಧರಾಜು ಮಹಾಸ್ವಾಮಿಜಿ, ಡಾ.ಎಲ್.ಹನುಮಂತಯ್ಯ, ಸಿನೆಮಾ ನಟಿ ಅಭಿನಯ, ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಎಸ್.ಕೌಜಲಗಿ, ಗೋವಿಂದರಾಜು ನಗರ ವಿದಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ರ.ನರಸಿಂಹಮೂರ್ತಿ ಹಾಜರಿದ್ದರು.