(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಲನಚಿತ್ರ ನಟ ಗಣೇಶ್ ರಾವ್ ಕೇಸರ್ ಕರ್ ಅವರು ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಿದರು.
ಹುಟ್ಟಿದ ಊರಿಗೆ ಹಾಗೂ ಓದಿದ ಶಾಲೆಗೆ ಕಾಯಕಲ್ಪ ಮಾಡಲು ಹೊರಟಿರುವ ನಟ ಗಣೇಶ್ ರಾವ್ ಕೇಸರ್ ಕರ್ ಅವರು ತಂದೆ ಮಾಜಿ ಸೇನಾಧಿಕಾರಿ ದಿ.ಆರ್. ಕೃಷ್ಣರಾವ್, ತಾಯಿಯರ ಸ್ಮರಣಾರ್ಥ ತಾವು ಓದಿದ ಶಾಲೆಯನ್ನು ದತ್ತು ಪಡೆದು ಕಳೆದ 2 ವರ್ಷಗಳಿಂದ ನಿರಂತರವಾಗಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಈಗಾಗಲೇ ಶಿಥಿಲಗೊಂಡಿದ್ದ ಶಾಲಾ ಕಟ್ಟಡವನ್ನು ಕೆಡವಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿದ್ದು. ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ಅವರು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.
ಇದಕ್ಕೂ ಮೊದಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ 2025-26 ನೇ ಶೈಕ್ಷಣಿಕ ವರ್ಷದ ಬಿಳಿ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಗಣೇಶ್ ರಾವ್ ಕೇಸರ್ ಕರ್ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು ನಾನು ಓದುವಾಗ ಶಾಲೆಯಲ್ಲಿ ಯಾವುದೇ ಸೌಲಭ್ಯವಿರಲಿಲ್ಲ ನಾನು ಇಂಗ್ಲಿಷ್ ಕಲಿತಿದ್ದು ಪಕ್ಕದ ಮದುವನಹಳ್ಳಿ ಶಾಲೆಯಲ್ಲಿ. ನಮ್ಮ ಗ್ರಾಮದಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು,ಬೇರೆಡೆ ಮಕ್ಕಳು ಹೋಗಬಾರದು ಅದಕ್ಕಾಗಿ ನಮ್ಮ ತಂದೆ ತಾಯಿ ಹೆಸರಲ್ಲಿ ದತ್ತು ತೆಗೆದುಕೊಂಡಿದ್ದೇನೆ ಈ ಕಾರ್ಯಕ್ಕೆ ನನ್ನೊಡನೆ ನಮ್ಮ ಗ್ರಾಮದ ನನ್ನ ಸಹಪಾಠಿ ಮಲ್ಲೆಶ್ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಶಾಲೆಯಲ್ಲಿ 20 ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ ನಾನು ಶ್ರೀಮಂತನಲ್ಲ, ಆದರೂ ನಾನು ಹುಟ್ಟಿ ಬೆಳೆದ ಈ ಶಾಲೆಗೆ ಏನಾದರೂ ಮಾಡಬೇಕೆಂಬ ಬಯಕೆ, ಹಾಗಾಗಿ ಅಂಬೇಡ್ಕರ್ ಚಿಂತನೆಯಂತೆ ನಾನು ಓದಿದ ಶಾಲೆಯನ್ನು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ಅಧಿಕೃತವಾಗಿ ದತ್ತು ತೆಗೆದುಕೊಂಡು ಕಾಯಕಲ್ಪ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದರು.
ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದೇನೆ, ಈ ಶಾಲೆಯನ್ನು ಸ್ಮಾರ್ಟ್ ಕ್ಲಾಸ್ ಮಾಡಲು ತೀರ್ಮಾನಿಸಿದ್ದೆ. ಅದರಂತೆ ಇಂದು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲಾಗಿದೆ. ವಿದ್ಯೆ ಕಲಿತರೆ ನಿಮ್ಮ ಬಳಿ ಯಾವುದೇ ಸಮಸ್ಯೆ ಸುಳಿಯುವುದಿಲ್ಲ ಎಂದು ಮಕ್ಕಳಿಗೆ ತಿಳಿಹೇಳಿದರು.
ಇದೇ ತಿಂಗಳ 24 ಕ್ಕೆ ಶಾಲೆಯಲ್ಲಿ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಮಕ್ಕಳು ಓದಿನ ಜೊತೆಗೆ ಆಟ ಪಾಠದಲ್ಲೂ ತೊಡಗಿಸಿ ಕೊಳ್ಳಬೇಕು ಯಾರು ಸಹ ಪುಸ್ತಕ ಪೆನ್ನು ಪೆನ್ಸಿಲ್ ಇಲ್ಲ ಎಂದು ಓದು ನಿಲ್ಲಿಸಬೇಡಿ ಯಾರಿಗಾದರೂ ಪೆನ್ನು ಪುಸ್ತಕ ಇಲ್ಲದಿದ್ದರೆ ಶಿಕ್ಷಕರ ಬಳಿ ಹೇಳಿಕೊಳ್ಳಿ ನಾವು ಒದಗಿಸಿಕೊಡುತ್ತೇವೆ ಎಲ್ಲರೂ ಚೆನ್ನಾಗಿ ಓದಿ ಊರಿಗೆ ಶಾಲೆಗೆ ಹೆಸರು ಕೀರ್ತಿ ತನ್ನಿ ಎಂದು ಕರೆನೀಡಿದರು.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ಮಾತನಾಡಿ ಹುಟ್ಟಿದ ಊರಿನ ಶಾಲೆಗೆ ಏನಾದರೂ ಸೇವೆ ಮಾಡಬೇಕೆಂಬುದನ್ನು ಗಣೇಶ್ ರಾವ್ ಅವರನ್ನು ನೋಡಿ ಕಲಿಯಬೇಕು ಎಂದು ಮೆಚ್ಚುಗೆಯಿಂದ ಹೇಳಿದರು.
ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು ಇಂತಹ ಪ್ರೋತ್ಸಾಹ ಕೊಡುವ ವವರು ಯಾರು ಇರಲಿಲ್ಲ, ನನ್ನ ವ್ಯಾಪ್ತಿಯ 80 ಹಳ್ಳಿಗಳಲ್ಲಿ ಇಂತಹ ಸಹಕಾರ ನೀಡುವ ಯಾವುದೇ ಶಾಲೆಗಳಿಲ್ಲ ಹಾಗಾಗಿ ನಿಮಗೆ ಪ್ರೋತ್ಸಾಹ ನೀಡಲು ಗಣೇಶ್ ರಾವ್ ಇದ್ದಾರೆ, ಶಿಕ್ಷಣ ನೀಡಲು ಉತ್ತಮ ಶಿಕ್ಷಕರಿದ್ದಾರೆ ಇನ್ನೇನು ಬೇಕು ಸಾಧನೆ ಮಾಡಲು ಇದನ್ನು ಬಳಸಿಕೊಂಡು ಗಣೇಶ ರವರ ಕನಸನ್ನು ನನಸು ಮಾಡಿ ಎಂದು ಕರೆ ನೀಡಿದರು.
ಚಾಮರಾಜನಗರ ಡಿ ಡಿ ಪಿ ಐ ಕಚೇರಿಯ ಡಿ ವೈ ಪಿ ಸಿ ನಾಗೇಂದ್ರ, ಡಯಟ್ ನ ನಾಗರಾಜುರವರು ಮಾತನಾಡಿ ಒಂದು ಶಾಲೆಯನ್ನ ಅಭಿವೃದ್ಧಿ ಮಾಡಿದರೆ ಆ ಗ್ರಾಮದ ಅಭಿವೃದ್ಧಿಯಾಗುತ್ತದೆ ಗಣೇಶ್ ರಾವ್ ಅವರು ಸಿನಿಮಾ ರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟೂರಿನ ಶಾಲೆಯನ್ನು ಮರೆತಿಲ್ಲ ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳ, ಶಾಲೆಯ ಮುಖ್ಯ ಶಿಕ್ಷಕ ವಾಸುದೇವ, ಗ್ರಾಮದ ಮುಖಂಡರುಗಳಾದ ಶಿವಣ್ಣ, ಗುರುಸ್ವಾಮಿ, ಮಲ್ಲಿಕಾರ್ಜುನ, ಶರತ್, ರಾಜಮ್ಮ, ಪುಷ್ಪವತಿ, ಸುರೇಶ್ ಗೌಡ, ಮಲ್ಲೇಶ್ ಮತ್ತಿತರರು ಹಾಜರಿದ್ದರು.