ಪಣಜಿ,ಮೇ.3: ಗೋವಾದ ಶಿರ್ಗಾಂವ್ ನ ಲೈರಾಯಿದೇವಿ ದೇವಾಲಯದ ಜಾತ್ರೆ ಮೆರವಣಿಗೆ ವೇಳೆ ಕಾಲ್ತುಳಿತ ಸಂಭವಿಸಿ 6 ಮಂದಿ ಮೃತಪಟ್ಟಿದ್ದು 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ದಕ್ಷಿಣ ಗೋವಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಮುಂಜಾನೆ 4.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಜಾತ್ರೆಯಲ್ಲಿ ಸಾಕಷ್ಟು ಭಕ್ತರು ಸೇರಿದ್ದರು.ಭಕ್ತರೊಬ್ಬರಿಗೆ ವಿದ್ಯುತ್ ತಂತಿಯಿಂದ ಶಾಕ್ ಹೊಡೆದಿದೆ.ಅವರು ಕೂಗಿ ಕೆಳಗೆ ಬಿದ್ದಾಗ ಏನೋ ಆಗಿದೆ ಎಂದುಕೊಂಡು ಗಾಬರಿಯಿಂದ ಜನ ನುಗ್ಗಿದ್ದಾರೆ.
ಆಗ ನೂಕು ನುಗ್ಗುಲು ಉಂಟಾಗಿದೆ, ಆತಂಕಗೊಂಡ ಭಕ್ತರು ಸುರಕ್ಷಿತ ಸ್ಥಳಕ್ಕೆ ಹೋಗಲು ಮುಗಿಬಿದ್ದುದರಿಂದ ಕಾಲ್ತುಳಿತ ಉಂಟಾಗಿದೆ.
ದೇವರ ದರ್ಶನ ಪಡೆಯಲು ಭಕ್ತರು ಸರದಿ ಸಾಲಿನಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ, ನೂಕು ನುಗ್ಗಲಿನಲ್ಲಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದರು.ಈ ಅವಘಡದಲ್ಲಿ ಆರು ಮಂದಿ ಮೃತರಾಗಿದ್ದಾರೆ.

ಲೈರಾಯಿ ದೇವಿ ಜಾತ್ರೆಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಆಘಾತ ತಂದಿದೆ. ಈ ಘಟನೆ ತೀವ್ರ ನೋವುಂಟು ಮಾಡಿದೆ. ಮೃತರ ಕುಟುಂಬದ ಜೊತೆ ಸರ್ಕಾರವಿದೆ ಎಂದು ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ,ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದಾರೆ. ಕೇಂದ್ರದಿಂದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಸಾವಂತ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ
ದ್ರೌಪದಿ ಮುರ್ಮು ಗೋವಾ ಕಾಲ್ತುಳಿತ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.