ಬೆಂಗಳೂರು: ಪಕ್ಕದ ಗೋವಾ ರಾಜ್ಯದಲ್ಲಿ ಕನ್ನಡಿಗರಿಗೆ ವಾಹನ ಖರೀದಿಸಲು ಮತ್ತು ಅವುಗಳನ್ನು ನೋಂದಣಿ ಮಾಡಿಸಲು ಪರವಾನಗಿ ನೀಡದಂತೆ ನಿರ್ಬಂಧದ ಕಾನೂನು ರೂಪಿಸಲು ಹೊರಟಿರುವ ಗೋವಾ ಸರ್ಕಾರದ ನಡೆಯನ್ನು ಆಪ್ ವಿರೋಧಿಸಿದೆ.
ಗೋವಾ ಸರ್ಕಾರದ ಈ ನೀತಿಯನ್ನು ಎಲ್ಲರೂ ವಿರೋಧಿಸಬೇಕು ಹಾಗೂ ಖಂಡಿಸಬೇಕು ಎಂದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಕರೆ ನೀಡಿದ್ದಾರೆ.
ನಮ್ಮ ದೇಶದ ಪ್ರಜೆಗಳು ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ವಾಸಿಸುವ ಅವಕಾಶವನ್ನು ನೀಡಿದೆ,ನಮ್ಮ ದೇಶದ ಸಂವಿಧಾನವನ್ನು, ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಗೋವಾ ಮುಖ್ಯಮಂತ್ರಿಗಳಿಗೆ ಎಲ್ಲ ಬಿಜೆಪಿ ನಾಯಕರು ಮತ್ತು ಪ್ರಧಾನಿ ಮೋದಿ ಅವರು ಬುದ್ಧಿ ಹೇಳಬೇಕು ಎಂದು ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ಗೋವಾ ರಾಜ್ಯದ ಸ್ಥಳೀಯ ಸಂಘಟನೆಗಳು ಕನ್ನಡಿಗರನ್ನು ಮೊದಲಿನಿಂದಲೂ ಅತಂತ್ರಗೊಳಿಸುವ ಹಾಗೂ ಹೊರದೊಬ್ಬುವ ಹುನ್ನಾರದಲ್ಲಿ ತೊಡಗಿದ್ದರು. ಈಗ ಸ್ವತಹ ಸರ್ಕಾರವೇ ಇಂತಹ ಸಂವಿಧಾನ ಬಾಹಿರ ಕೃತ್ಯಕ್ಕೆ ತೊಡಗಿರುವುದು ನಿಜಕ್ಕೂ ಭಾರತಮಾತೆಗೆ ಮಾಡುವ ದ್ರೋಹವಾಗಿದೆ ಎಂದು ಹೇಳಿದ್ದಾರೆ.
ಹಲವು ದಶಕಗಳಿಂದ ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಗಣನೀಯ ಪಾತ್ರವನ್ನು ವಹಿಸಿರುವ ಕನ್ನಡಿಗರು ಈ ರೀತಿಯ ಅನ್ಯಾಯಕ್ಕೆ ಒಳಗಾಗುವುದನ್ನು ಸಹಿಸಲು ಸಾಧ್ಯವಿಲ್ಲ.
ಪ್ರತಿಯೊಂದು ರಾಜ್ಯಗಳು ಇದೇ ನೀತಿಯನ್ನು ಅನುಸರಿಸಿದರೆ ದೇಶದಲ್ಲಿ ಅಂತಃಕಲಹ ಭುಗಿಲೆದ್ದು ದೇಶವೇ ಆತಂಕಕಾರಿ ಪರಿಸ್ಥಿತಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೂಡಲೇ ದೇಶದ ಪ್ರಧಾನಿಗಳು ಮಧ್ಯಪ್ರವೇಶ ಮಾಡಿ ಗೋವಾ ರಾಜ್ಯದ ಈ ರೀತಿಯ ಕನ್ನಡಿಗರ ಮೇಲಿನ ದಬ್ಬಾಳಿಕೆ , ದೌರ್ಜನ್ಯ ನೀತಿಯನ್ನು ತಡೆಗಟ್ಟಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.