ಕನ್ನಡ ಚಳವಳಿಗಾರರು,ಸಾಮಾಜಿಕ ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಿ- ತೇಜಸ್ವಿ

Spread the love

ಮೈಸೂರು: ರಾಜ್ಯದಲ್ಲಿನ ಕನ್ನಡ ಚಳವಳಿಗಾರರು ಮತ್ತು ಸಾಮಾಜಿಕ ಹೋರಾಟಗಾರ ರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ಮನವಿ ಮಾಡಿದ್ದಾರೆ.

ಸಮಾಜದಲ್ಲಿ ಅನ್ಯಾಯ ನಡೆಯುತ್ತಿದ್ದಾಗ ಮತ್ತು ಅಕ್ರಮಗಳು ಕಂಡಾಗ ಕನ್ನಡ ಚಳವಳಿಗಾರರು ಮತ್ತು ಸಾಮಾಜಿಕ ಹೋರಾಟಗಾರರು ವಿರೋಧ ಪಕ್ಷಗಳ ರೀತಿ ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತರುವಂತಹ ಕಾರ್ಯಗಳನ್ನು ಈ ಹಿಂದಿನಿಂದಲೂ ಮಾಡುತ್ತ ಬಂದಿದ್ದಾರೆ.

ರಾಜ್ಯದಲ್ಲಿರುವ ಇಂತಹ ಹೋರಾಟಗಾರರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕಿದೆ.
ಹೋರಾಟಗಾರರು ತಮ್ಮ ಜೀವನವನ್ನೇ ತ್ಯಾಗ ಮಾಡಿ ನಾಡು ನುಡಿ ನೆಲ ಜಲ ಭಾಷೆ ವಿಷಯದಲ್ಲಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಾಗೂ ಅಕ್ರಮ ಚಟುವಟಿಕೆಗಳ ವಿರುದ್ಧ ರೌಡಿ ಚಟುವಟಿಕೆಗಳನ್ನು ಶಾಶ್ವತವಾಗಿ ಮಟ್ಟಹಾಕುವಂತೆ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ.

ಪ್ರಸಕ್ತ ಧರ್ಮಸ್ಥಳ ವಿಚಾರವೂ ದೇಶಾದ್ಯಂತ ಸಂಚಲನ ಮೂಡಿಸಿದೆ ಇದರ ಮುಂಚೂಣಿ ಹೋರಾಟಗಾರರಿಗೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ತೇಜಸ್ವಿ ಕೋರಿದ್ದಾರೆ.

ಮೈಸೂರಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ನಗರ ಪಾಲಿಕೆಗೆ ದೂರು ನೀಡಿದ ರಮೇಶ್ ಕುಮಾರ್ ಮಾಲಿ ಎಂಬುವವರ ಮೇಲೆ ಮಾಜಿ ನಗರ ಪಾಲಿಕೆ ಸದಸ್ಯ ಹಲ್ಲೆ ಮಾಡಿದ್ದಾರೆ.

ಇಂತಹ ಪ್ರಭಾವಿಗಳ ವಿರುದ್ಧ ಹೋರಾಟ ನಡೆಸುತ್ತಾ ಬಂದಿರುವ ಹೋರಾಟಗಾರರನ್ನು ಗುರುತಿಸಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.