ಹುಬ್ಬಳ್ಳಿ: 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಆರೋಪಿ ರಿತೇಶ್ ಕುಮಾರ್ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ.
ಬಾಲಕಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಅವನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಓಡಿಹೋಗಲು ಯತ್ನಿಸಿದ್ದಾನೆ.
ಅಲ್ಲದೇ ಪೊಲೀಸ್ ಜೀಪಿನ ಮೇಲೂ ಕಲ್ಲು ತೂರಿದ್ದಾನೆ.
ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ಫೈರಿಂಗ್ ಮಾಡಿದ್ದಾರೆ, ಲೇಡಿ ಪೊ ಎಸ್ ಐ ಅನ್ನಪೂರ್ಣ ಅವರು ಹಾರಿಸಿದ ಗುಂಡು ತಗುಲಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪಾಪಿ ಮೃತಪಟ್ಟಿದ್ದಾನೆ.

ಇತ್ತ ಘಟನೆಯಲ್ಲಿ ಒಬ್ಬ ಪಿಎಸ್‌ಐ ಮತ್ತು ಇಬ್ಬರು ಸಿಬ್ಬಂದಿಗೂ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯು ಬಾಲಕಿಗೆ ಚಾಕ್ಲೀಟ್ ಆಸೆ ತೋರಿಸಿ ಕಿಡ್ನಾಪ್ ಮಾಡಿ ಬಳಿಕ ಅತ್ಯಾಚಾರ ಮಾಡಿದ್ದಾನೆ. ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಘಟನೆ ಖಂಡಿಸಿ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಆತನನ್ನು ಎನ್‌ಕೌಂಟರ್ ಮಾಡುವಂತೆ ಆಗ್ರಹಿಸಿದ್ದರು.
ಆರೋಪಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನಾ ನಿರತರು ಪೊಲೀಸ್ ಕಮಿಷನರ್ ಶಶಿಕುಮಾರ್ ಪರ ಜಯಕಾರ ಹಾಕಿದರು.