ಬೆಂಗಳೂರು: ಜಿಬಿಎ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಪಾರದರ್ಶಕತೆ ತರಲು ವಿಶೇಷ ಉಪ ಲೋಕಾಯುಕ್ತರನ್ನು ನೇಮಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಸರ್ಕಾರವು ಈಗಾಗಲೇ ನೂತನವಾಗಿ ರಚಿಸಿರುವ ಜಿಬಿಎ ಆಡಳಿತ ಸೇರಿದಂತೆ ಐದು ನಗರ ಪಾಲಿಕೆಗಳ ಆಡಳಿತದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಹಾಗೂ ಪಾರದರ್ಶಕತೆಯನ್ನು ತರಲು ಪ್ರತ್ಯೇಕವಾಗಿ ಉಪಲೋಕಾಯುಕ್ತರನ್ನು ನೇಮಿಸುವುದು ಸೂಕ್ತ ಎಂದು ಸುದ್ದಿ ಗೋಷ್ಠಿಯಲ್ಲಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ
ಒತ್ತಾಯಿಸಿದರು.
ಈ ಹಿಂದಿನ ಬಿಬಿಎಂಪಿ ಆಡಳಿತಾವಧಿಯಲ್ಲಿ ಇತ್ತೀಚಿನ ದಶಕಗಳಲ್ಲಿ ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಲಾಗಿದೆ, ಬಿಡಿಗಾಸು ಸಹ ಚಪ್ತ ಮಾಡಲು ಸಾಧ್ಯವಾಗಿಲ್ಲ ಹಾಗೂ ಯಾರಿಗೂ ಇದುವರೆಗೂ ಶಿಕ್ಷೆ ಆಗಿಲ್ಲ. ಇದೇ ರೀತಿಯ ಭ್ರಷ್ಟ ಆಡಳಿತ ಈಗಿನ ಜಿಬಿಎ ದಲ್ಲಿ ಮುಂದುವರಿದಿದೆ, ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಬೆಂಗಳೂರಿಗರು ಎಲ್ಲಾ ವಲಯಗಳಲ್ಲು ಸಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿನ ಗುತ್ತಿಗೆದಾರರಿಗೆ ಈಗಿರುವ ಕಾನೂನಿನಲ್ಲಿ ತಪ್ಪಿಸಿಕೊಳ್ಳಲು ಸಾಕಷ್ಟು ನೆರವು ಸಿಗುತ್ತಿದೆ. ಗುತ್ತಿಗೆದಾರರನ್ನು ಸಹ ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ವಿರುದ್ಧವು ಕಠಿಣ ಕ್ರಮ ತೆಗೆದುಕೊಳ್ಳಲು ಕಾನೂನು ತಿದ್ದುಪಡಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
ಉಪಲೋಕಾಯುಕ್ತರಿಗೆ ಜಿಬಿಎ ಕೇಂದ್ರ ಕಚೇರಿಯಲ್ಲಿಯೇ ಸಕಲ ವ್ಯವಸ್ಥೆಗಳುಳ್ಳ ಕಚೇರಿಯನ್ನು ನೀಡಬೇಕು. ಬ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಮಾತನಾಡಿ,ಈಗಿರುವ ಕಾನೂನಿನಲ್ಲಿ ಗುತ್ತಿಗೆದಾರರನ್ನು ನೇರವಾಗಿ ಆರೋಪಿಗಳನ್ನು ಮಾಡಲು ಸಾಧ್ಯವಿಲ್ಲ ಹಾಗಾಗಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಭ್ರಷ್ಟ ಗುತ್ತಿಗೆದಾರರನ್ನು ಕಾನೂನಿನ ಅಂಕುಶಕ್ಕೆ ಒಳಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ , ರಾಜ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.
ಜಿಬಿಎ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗೆಉಪ ಲೋಕಾಯುಕ್ತರ ನೇಮಿಸಿ:ಆಪ್