ಮೈಸೂರು: ಮೊಬೈಲ್ ಪ್ರಸ್ತುತ ಸಮಾಜದ ಸಾಮಾಜಿಕ ವ್ಯವಸ್ಥೆಯನ್ನೇ ಬದಲಿಸಿಬಿಟ್ಟಿದೆ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಬೇಸರ ವ್ಯಕ್ತಪಡಿಸಿದರು.
ಈ ಮೊಬೈಲ್ ಗಳಿಂದ ಪರಸ್ಪರ ಒಬ್ಬರಿಗೊಬ್ಬರು ಮಾತನಾಡಿ ಕೊಳ್ಳುವ ಪ್ರಕ್ರಿಯೆಯನ್ನೇ ಮರೆಸಿಬಿಟ್ಟಿದೆ ಎಂದು ಹೇಳಿದರು

ಮೈಸೂರಿನ ಸರಸ್ವತಿಪುರಂ ಶ್ರೀಕೃಷ್ಣಧಾಮದ
ಶ್ರೀಕೃಷ್ಣಭವನದಲ್ಲಿ ಶ್ರೀಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣಮಿತ್ರ ಮಂಡಳಿ ಸಹಯೋಗ ದೊಂದಿಗೆ ನಡೆದ ತಿಂಗಳ ಸಾಂಸ್ಕೃತಿಕೋತ್ಸವ ಕಾರ್ಯಕ್ರಮದ ‘ಹಾಸ್ಯ ಸಂಜೆ’ ಕಾರ್ಯಕ್ರಮದಲ್ಲಿ ಪ್ರಾಣೇಶ್ ಮಾತನಾಡಿದರು.
ಮೊಬೈಲ್‌ನಲ್ಲಿ ನಾವು ಎಲ್ಲಾ ಮಾಹಿತಿ ಗಳನ್ನು ಪಡೆಯಬಹುದು ಆದರೆ, ನಮ್ಮಲ್ಲಿನ ಕೌಶಲ್ಯ ಕಡಿಮೆಯಾಗುತ್ತದೆ. ಜ್ಞಾಪಕ ಶಕ್ತಿ ಕ್ಷೀಣಿಸುತ್ತದೆ. ಇದರಿಂದ ಯುವಕರಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಸಂಗೀತ, ಸಾಹಿತ್ಯ, ನಾಟಕ ವೀಕ್ಷಣೆಗೆ ಪ್ರೇಕ್ಷಕರ ಕೊರತೆ ಎದುರಾಗಿದೆ,ಅದರಲ್ಲೂ ವಿಶೇಷ ಉಪನ್ಯಾಸಗಳಿಗೆ ಜನರು ಹೋಗುವುದೇ ವಿರಳವಾಗಿದೆ ಎಂದು ವಿಷಾದಿಸಿದರು.
ಹರಿಕಥೆ, ಹಾಸ್ಯ, ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಮಾತ್ರ ಮಧ್ಯಮ ವಯಸ್ಕರು, ವೃದ್ಧರು ಖಾಯಂ ಪ್ರೇಕ್ಷಕರು. ಮೊಬೈಲ್ ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ ಯುವಕ-ಯುವತಿ ಯರು ಮೊಬೈಲ್ ಹಿಂದೆ ಓಡುತ್ತಿರುವ ವೇಗ ಹೆಚ್ಚಾಗಿದೆ. ಒಟ್ಟಾರೆ ಮೊಬೈಲ್ ಮೋಹದಿಂದ ನಮ್ಮ ಪರಂಪರೆ, ಸಂಸ್ಕೃತಿಯನ್ನೇ ಯುವ ಸಮೂಹ ಮರೆಯುತ್ತಿದೆ
ಎಂದು ಬೇಸರ ಪಟ್ಟರು.
ಯುವ ಸಮೂಹ ಮೊಬೈಲ್ ಬಳಸು ವುದನ್ನು ಸೀಮಿತಗೊಳಿಸಿ, ಪುಸ್ತಕಗಳನ್ನು ಓದುವುದರ ಕಡೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಮೊಬೈಲ್ ಬಳಕೆ ಹೊಸ ರೋಗ ಗಳಿಗೆ ಆಹ್ವಾನ ನೀಡಿದಂತೆ. ಮೊಬೈಲ್‌ನಲ್ಲಿ ಎಲ್ಲಾ ಮಾಹಿತಿಗಳು ಸಿಕ್ಕರೂ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಗಂಗಾವತಿ ಪ್ರಾಣೇಶ್ ಅಭಿಪ್ರಾಯ ಪಟ್ಟರು.
ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ಪಿ.ಎಸ್.ಶೇಖರ್, ಉದ್ಯಮಿ ರವಿಶಾಸ್ತ್ರಿ, ಕಾರ್ಯದರ್ಶಿ ಕೆ.ವಿ.ಶ್ರೀಧರ್, ಮಿತ್ರಮಂಡಳ ಉಪಾಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ರಾಘವೇಂದ್ರ ಪ್ರಸಾದ್, ಶ್ರೀವತ್ಸ, ಮಂಗಳಾ ಮತ್ತಿತರರು ಉಪಸ್ಥಿತರಿದ್ದರು.
