ಮೈಸೂರು: ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ, ರಸಾಯನ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಲಕ್ಷ್ಮಣ ಅವರು ಗಾಂಧೀಜಿ ಅವರ ತತ್ವಗಳ ಇಂದಿನ ಅಗತ್ಯಗಳ ಬಗ್ಗೆ ಬೆಳಕು ಚೆಲ್ಲಿದರು.
ಆಧುನಿಕತೆಯ ಸೆಳೆತಕ್ಕೆ ಸಿಲುಕಿ ತಾತ್ವಿಕ ದ್ವಂದ್ವ ನೀತಿ ಅನುಸರಿಸುತ್ತಿರುವ ಹೊಸ ತಲೆಮಾರು ಸರಿಯಾದ ಮಾರ್ಗ ಕಾಣದೆ ಇರುವ ಸಂದರ್ಭ ಬಂದಿದೆ. ಹಾಗಾಗಿ, ಈ ಸಮುದಾಯಕ್ಕೆ ಮಹಾತ್ಮ ಗಾಂಧಿಯನ್ನು ಸರಿಯಾಗಿ ಪರಿಚಯಿಸುವ ಅಗತ್ಯ ಇದೆ. ಇಲ್ಲದೇ ಹೋದರೆ ಸಮಾಜಕ್ಕೆ ಇಂಥ ಸಮುದಾಯ ಹೊರೆಯಾಗುವ ಸಂಭವ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಂತ್ರಜ್ಞಾನದ ಸೆಳೆತ ಮತ್ತು ಆಕರ್ಷಣೆಯ ಬದುಕು, ಲಾಲಸೆ ಯುವ ಜನಾಂಗಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.ಹಾಗಾಗಿ, ಮಹಾತ್ಮ ಗಾಂಧಿ ಅವರ ತತ್ವಗಳ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಂ. ಅಬ್ದುಲ್ ರಹಿಮಾನ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಅಭಿವೃದ್ಧಿಗೆ ಕೊಟ್ಟ ಕೊಡುಗೆಗಳ ಗುಣಗಾನ ಮಾಡಿದರು. ಜೈ ಜವಾನ್ ಜೈ ಕಿಸಾನ್ ಎಂಬ ಶಾಸ್ತ್ರಿ ಅವರ ಮಾತು ಕಾರ್ಯರೂಪಕ್ಕೆ ಬರಲು ಯುವ ಸಮುದಾಯ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಭೀಮೇಶ್ ಎಚ್. ಜೆ ಅಧ್ಯಾಪಕರಾದ ಡಾ.ಶೋಭಾ ಎನ್, ಡಾ .ಲಾವಣ್ಯ, ಡಾ ವಿಂದುವಾಹಿನಿ, ಡಾ ಕವಿತಾ, ಡಾ ಪ್ರತಿಮಾ, ಡಾ.ಶೀಲಾ ಮತ್ತಿತರರಿದ್ದರು.