ಬೆಂಗಳೂರು: ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಬಿಎಂಪಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮ ದಿನಾಚರಣೆ ಮತ್ತು ಸ್ವಚ್ಚತಾ ಆಂದೋಲನಾ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಮಾತನಾಡಿದರು.
ಮಹಾತ್ಮಗಾಂಧಿ ಮೊದಲು ಇಡೀ ಗ್ರಾಮೀಣ ಭಾರತವನ್ನು ಸುತ್ತಾಡಿ ನಮ್ಮ ಜನರ ಬದುಕು ಮತ್ತು ಬವಣೆಯನ್ನು ಅರ್ಥ ಮಾಡಿಕೊಂಡು ನಂತರ ಅದಕ್ಕೆ ತಕ್ಕಂತೆ ಸ್ವಾತಂತ್ರ್ಯ ಹೋರಾಟ ಸಂಘಟಿಸಿ ಸ್ವತಃ ಜೈಲು ಸೇರಿ ಹೋರಾಟ ಮುಂದುವರೆಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದು ಹೇಳಿದರು.
ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿ 1947 ರಲ್ಲಿ ಬ್ರಿಟೀಷರು ಭಾರತದಿಂದ ತೊಲಗುವಂತೆ ಮಾಡಿದರು ಎಂದು ಸ್ಮರಿಸಿದರು.
ಸ್ವಾತಂತ್ರ್ಯ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ಈಡೇರಿಸುವ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳೂ ಕೂಡ ಬಡವರಿಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸಿಕೊಡುವುದಾಗಿದೆ ಎಂದು ಸಿಎಂ ತಿಳಿಸಿದರು.
ಗ್ರಾಮಗಳ ಉದ್ದಾರ ಆಗದೆ ದೇಶ ಉದ್ದಾರ ಆಗಲು ಸಾಧ್ಯವಿಲ್ಲ ಎಂದು ನಾವು ಗ್ರಾಮಗಳ ಪ್ರಗತಿಗೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.
ಆತ್ಮ ಸಾಕ್ಷಿಯ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದದು. ಆದ್ದರಿಂದ ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ಗಾಂಧಿಯವರಿಗೆ ನಾವು ಸಲ್ಲಿಸುವ ದೊಡ್ಡ ಗೌರವ ಎಂದು ಸಿದ್ದರಾಮಯ್ಯ ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಕೆ.ಪಾಟೀಲ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆಯುಕ್ತರಾದ ತುಷಾರ ಗಿರಿನಾಥ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.