ಜೂಜು ಅಡ್ಡೆ ಮೇಲೆ ಡಿಎಸ್ಬಿ ಶಾಖೆ ಇನ್ಸ್ ಪೆಕ್ಟರ್ ದಾಳಿ, ಪೊಲೀಸ್ ಪೇದೆ ಅಮಾನತು!

Spread the love

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಅಕ್ರಮ ಜೂಜಾಟ ನಡೆಯುತ್ತಿದ್ದರೂ ಸಹ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ, ಮೇಲಾಧಿಕಾರಿಗಳಿಗೆ ವರದಿ ಮಾಡದೆ, ಕರ್ತವ್ಯಲೋಪ ಎಸಗಿರುವ ಪೇದೆಯನ್ನ ಸೇವೆಯಿಂದ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಗುಪ್ತಮಾಹಿತಿ ಸಿಬ್ಬಂದಿ ಅಶೋಕ್ ಅಮಾನತ್ತುಗೊಂಡಿದ್ದಾರೆ.

ಗ್ರಾಮಾಂತರ ಠಾಣಾ ಸರಹದ್ದಿನಲ್ಲಿ ಅಕ್ರಮ ಜೂಜಾಟ ನಡೆಯುತ್ತಿದ್ದರೂ ಸಹ ಈ ಬಗ್ಗೆ ಮಾಹಿತಿ ಸಂಗ್ರಹಿಸಿ, ಮೇಲಾಧಿಕಾರಿಗಳಿಗೆ ವರದಿ ಮಾಡದೆ, ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿ ಕರ್ತವ್ಯಲೋಪವೆಸಗಿರುವ ಕಾರಣ ಅಶೋಕ್ ಅವರನ್ನು ಅಮಾನತ್ತು ಗೊಳಿಸಿರುವುದಾಗಿ ಉಲ್ಲೇಖಿಸಲಾಗಿದೆ‌

ಗ್ರಾಮಾಂತರ ಠಾಣಾ ವ್ಯಾಪ್ತಿಯ ವೀರನಪುರ ಗ್ರಾಮದ ನಾಗರಾಜು ಎಂಬುವವರ ಜಮೀನಿಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಹಣವನ್ನು ಪಣವಾಗಿಟ್ಟುಕೊಂಡು ಅಂದರ್‌ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಕಾನೂನು ರೀತಿ ಕ್ರಮವಹಿಸದೇ ನಿರ್ಲಕ್ಷ್ಯತೆ ವಹಿಸಿದ್ದರು.

ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ಕಚೇರಿಯ ಡಿ.ಎಸ್.ಬಿ. ವಿಭಾಗದ ಪೊಲೀಸ್ ನಿರೀಕ್ಷಕರಾದ ಎಲ್.ಸಿ.ಶ್ರೀಧರ್ ಅವರು ರಾತ್ರಿ ಗಸ್ತು ಸಂದರ್ಭದಲ್ಲಿ ತೆರಕಣಾಂಬಿ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ್ ಮತ್ತು ಸಿಬ್ಬಂದಿಗಳ ಜೊತೆ ಹೊಸ ವರ್ಷದ ದಿನ ಮುಂಜಾನೆ ದಾಳಿ ನಡೆಸಿ ನಗದು 1.66,650 ರೂ ಹಾಗೂ 6 ಬೈಕ್‌ಗಳು, ಜೂಜಾಟ ಆಡುತ್ತಿದ್ದ 11 ಜನರನ್ನು ವಶಕ್ಕೆ ಪಡೆದು ಚಾಮರಾಜನಗರ ಗ್ರಾಮಾಂತರ ಠಾಣೆಗೆ ವರದಿ ನೀಡಿ ಪ್ರಕರಣ ದಾಖಲಿಸಿದ್ದರು.

ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ನಡೆಯಲು ಪರೋಕ್ಷವಾಗಿ ಕಾರಣಕರ್ತರಾಗಿ ಕರ್ತವ್ಯದಲ್ಲಿ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನಲೆಯಲ್ಲಿ ಇಲಾಖಾ ವಿಚಾರಣೆ ಹಾಗೂ ಇಲಾಖಾ ಶಿಸ್ತಿನ ಕ್ರಮ ಬಾಕಿ ಇರಿಸಿ ಎಸ್ಪಿ ಕವಿತಾ ಅವರು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಪಟ್ಟಣದಲ್ಲೂ ಕ್ಲಬ್ ಮೇಲೆ ದಾಳಿ ನಡೆಸಿದ ಡಿಎಸ್ಬಿ ಶಾಖೆಯ ಇನ್ಸ್ ಪೆಕ್ಟರ್ ಶ್ರೀಧರ್ ಅವರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಮೇರೆಗೆ ಎಸ್ಪಿ ಅವರು ಗುಪ್ತ ಮಾಹಿತಿ ಸಿಬ್ಬಂದಿ ಸೇರಿದಂತೆ ಇಬ್ಬರನ್ನು ಅಮಾನತು ಮಾಡಿದ್ದರು.

ಇದರ ಬೆನ್ನ ಹಿಂದೆಯೆ ಇದೀಗ ಗ್ರಾಮಾಂತರ ಗುಪ್ತ ಮಾಹಿತಿ ಸಿಬ್ಬಂದಿ ಅಶೋಕ್ ಅವರನ್ನು ಅಮಾನತು ಮಾಡಲಾಗಿದೆ.

ಇತ್ತೀಚೆಗೆ ಜಾನುವಾರುಗಳ ಸಾಗಾಣಿಕೆಯಲ್ಲೂ ಠಾಣೆಯೊಂದರ ಪೊಲೀಸರ ಪಾತ್ರ ಇದೆ ಎಂದು ಕೇಳಿ ಬರುತ್ತಿದ್ದು ಅದು ಕೂಡ ವಿಚಾರಣೆ ನಡೆಸುವ ಸಾದ್ಯತೆ ಇದೆ ಎಂದು ಕೇಳಿಬರುತ್ತಿದೆ.

ಡಿಎಸ್ಬಿ ಶಾಖೆಯ ಇನ್ಸ್ ಪೆಕ್ಟರ್ ಶ್ರೀದರ್ ಅವರ ಕಾರ್ಯಕ್ಷಮತೆಯನ್ನ ಸಾರ್ವಜನಿಕರು ಪ್ರಶಂಸಿಸಿದ್ದಾರೆ.