ಹೆಚ್.ಡಿ.ಕೋಟೆ: ಎಚ್ ಡಿ ಕೋಟೆ ತಾಲೂಕಿನ ಹುಣಸೂರು ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ರಸ್ತೆ ಸಂಪೂರ್ಣ ಹಳ್ಳ ಕೊಳ್ಳಗಳಿಂದ ಕೂಡಿದ್ದು ವಾಹನ ಸವಾರರಿಗೆ ಯಮ ಸ್ವರೂಪಿಯಾಗಿ ಪರಿಣಮಿಸಿದೆ.
ಎಚ್ ಡಿ ಕೋಟೆ – ಹುಣಸೂರು ರಸ್ತೆ ಒಂದು ರೀತಿ ಹೈವೇ ಇದ್ದಂತಿದೆ ಹಾಗಾಗಿ ಸದಾ ವಾಹನಗಳ ಸಂಚಾರ ಇದ್ದೇ ಇರುತ್ತದೆ.
ಆದರೆ ಈ ರಸ್ತೆ ಗುಂಡಿ ಬಿದ್ದು ಹಾಳಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಗ್ಯಾರಂಟಿ.

ಈಗ ಮಳೆಗಾಲ,ಗುಂಡಿಯಲ್ಲಿ ನೀರು ತುಂಬಿದರೆ ರಸ್ತೆ ಯಾವುದು ಗುಂಡಿ ಯಾವುದು ಎಂಬುದು ಗೊತ್ತಾಗುವುದಿಲ್ಲ.ಡಾಂಬರು ಕೂಡಾ ಕಿತ್ತುಹೋಗಿ ಕೆಸರುಗದ್ದೆ ಯಾಗಿದೆ.
ನಿನ್ನೆಯಷ್ಟೆ ಇದೇ ರಸ್ತೆ ಗುಂಡಿಯಲ್ಲಿ ದ್ವಿಚಕ್ರವಾಹನ ಸ್ಕಿಡ್ ಆಗಿ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದಾರೆ.
ಇದೇ ರಸ್ತೆಯಲ್ಲೇ ಜನಪ್ರತಿನಿಧಿಗಳು,
ಸಂಬಂಧಪಟ್ಟ ಅಧಿಕಾರಿಗಳು ಸಂಚರಿಸುತ್ತಾರೆ,ಆದರೆ ಇವರು ಯಾರಿಗೂ ಇಲ್ಲಿನ ರಸ್ತೆ ರಾಡಿ ಹಾಗೂ ಗುಂಡಿಗಳು ಕಣ್ಣಿಗೆ ಕಾಣುವುದಿಲ್ಲವೆ?.
ಈ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾದರೂ ಗುಣಮಟ್ಟದ ಕಾಮಗಾರಿ ಮಾಡುವುದಿಲ್ಲ,ಸರ್ಕಾರದ ಹಣ,ಜನತೆಯ ತೆರಿಗೆ ಹಣ ಸುಖಾಸುಮ್ಮನೆ ಪೋಲಾಗುತ್ತಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಈ ರಸ್ತೆ ಗುಂಡಿಗಳಿಗೆ ಜಲ್ಲಿ, ಮಣ್ಣು ತುಂಬಿ ಮಟ್ಟ ಮಾಡಿದರೆ ದ್ವಿಚಕ್ರವಾಹನ ಸವಾರರು ನೆಮ್ಮದಿಯಾಗಿ ಸಂಚರಿಸಬಹುದು ಆದರೆ ಈ ದೊಡ್ಡ ದೊಡ್ಡ ಗುಂಡಿಗಳಲ್ಲಿ ಭಾರಿ ವಾಹನಗಳು ಕೂಡಾ ವಾಲುತ್ತವೆ.
ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು ಈ ರಸ್ತೆ ಬಗ್ಗೆ ಗಮನಹರಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.