ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್ಗೆ ಬಿಸಿಲಿನಲ್ಲಿ ವಾಕ್ ಮಾಡಲು ಅವಕಾಶ ಹೊರತುಪಡಿಸಿ ಜೈಲಿನ ಎಲ್ಲಾ ನಿಯಮಗಳ ಪಾಲನೆಯಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಕೋರ್ಟ್ಗೆ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.
ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಮೂಲಸೌಕರ್ಯ ಒದಗಿಸದ ಆರೋಪ ಸಂಬಂಧ ಖುದ್ದು ತೆರಳಿ ಪರಿಶೀಲಿಸುವಂತೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ,
ಕಾನೂನು ಸೇವಾ ಪ್ರಾಧಿಕಾರವು
ಸ್ಥಳ ಪರಿಶೀಲನೆ ನಡೆಸಿತು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಆರೋಗ್ಯ ದೃಷ್ಠಿಯಿಂದ ಬಿಸಿಲಿನಲ್ಲಿ ವಾಕ್ ಮಾಡಲು ಅವಕಾಶ ಕಲ್ಪಿಸಬೇಕು ಅದು ಬಿಟ್ಟರೆ, ಜೈಲಿನ ಕೈಪಿಡಿ ಅನುಸಾರ ಎಲ್ಲ ನಿಯಮ ಪಾಲನೆಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ದರ್ಶನ್ಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ನಗರದ 57ನೇ ಸಿಸಿಹೆಚ್ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.
ಜೈಲಿನ ಕೈಪಿಡಿ ಅನುಸಾರ ಸೌಲಭ್ಯ ಒದಗಿಸಬೇಕೆಂದು ಕೋರ್ಟ್ ಹೇಳಿತ್ತು. ಆದರೂ ಜೈಲಾಧಿಕಾರಿಗಳು ನ್ಯಾಯಾಲಯ ಆದೇಶವನ್ನ ಧಿಕ್ಕರಿಸಿದ್ಧಾರೆ ಎಂದು ದರ್ಶನ್ ಪರ ವಕೀಲರು ಆರೋಪಿಸಿದ್ದರು.
ಈ ಬಗ್ಗೆ ಖುದ್ದು ಜೈಲಿಗೆ ಬಂದು ಪರಿಶೀಲಿಸುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ್ದ ನ್ಯಾಯಾಲಯವು ಕಾನೂನು ಸೇವಾ ಪ್ರಾಧಿಕಾರಕ್ಕೆ ಜೈಲಿಗೆ ಭೇಟಿ ನೀಡಿ ಅ.18ರೊಳಗೆ ವರದಿ ನೀಡುವಂತೆ ಸೂಚಿಸಿತ್ತು.
ಅದರಂತೆ ಬೆಂಗಳೂರು ನಗರ ಜಿಲ್ಲಾ ವಿಭಾಗದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ.ವರದರಾಜು ಅವರು ಕಳೆದ ಮಂಗಳವಾರ ತೆರಳಿ ಪರಿಶೀಲಿಸಿ, ಕೋರ್ಟ್ಗೆ ವರದಿ ನೀಡಿದ್ಧಾರೆ.
ನ್ಯಾಯಾಲಯದ ಆದೇಶದ ಅನುಸಾರ ಕಳೆದ ಮಂಗಳವಾರ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದ ವರದರಾಜು ಅವರು ದರ್ಶನ್ ಆರೋಗ್ಯ ವಿಚಾರಿಸಿ,ನಂತರ ಅವರು ಇರುವ ಬ್ಯಾರಕ್ನ್ನು ಪರಿಶೀಲಿಸಿದ್ದರು. ಅಲ್ಲದೇ, ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳ ಬಗ್ಗೆ ತಕರಾರು ಎತ್ತಿರುವ ಅಂಶಗಳ ಬಗ್ಗೆ ದರ್ಶನ್ ಜೊತೆ ಖುದ್ದು ಚರ್ಚಿಸಿದ್ದರು.
ದರ್ಶನ್ ಇರುವ ಬ್ಯಾರಕ್ನಲ್ಲಿ ಇಂಡಿಯನ್ ಹಾಗೂ ವೆಸ್ಟರ್ನ್ ಶೈಲಿಯ ಎರಡು ಶೌಚಾಲಯಗಳಿವೆ. ಹಾಸಿಗೆ, ದಿಂಬು ಕೊಟ್ಟಿಲ್ಲವೆಂಬ ಆರೋಪ ಸಂಬಂಧ ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬಿಗೆ ಅವಕಾಶವಿಲ್ಲ. ಇತರೆ ಕೈದಿಗಳಂತೆ ಬಿಸಿಲಿನಲ್ಲಿ ದರ್ಶನ್ ನಡೆದಾಡಲು ಬಿಟ್ಟಿಲ್ಲವೆಂಬ ತಕರಾರಿಗೆ ನಿಯಮದಂತೆ 1 ಗಂಟೆ ವಾಕಿಂಗ್ ಹಾಗೂ ಆಟವಾಡಲು ಅವಕಾಶ ನೀಡಬಹುದು. ಆದರೆ, ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದ ಓಡಾಡಿದರೆ ಇತರ ಬ್ಯಾರಕ್ನವರು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್ ಮೆಂಟ್ಗಳಿಂದ ಫೋಟೋ ತೆಗೆಯುತ್ತಾರೆಂದು ಜೈಲಾಧಿಕಾರಿಗಳು ಆಕ್ಷೇಪಿಸಿದ್ದಾರೆ. ಜೈಲಿನ ಶಿಸ್ತುಪಾಲನೆ ಹಾಗೂ ನಿರ್ವಹಣೆ ಹೊರತುಪಡಿಸಿ, ವಾಕಿಂಗ್ ಮಾಡಲು ಹಾಗೂ ಆಟಕ್ಕೆ ಅವಕಾಶ ನೀಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಟಿ.ವಿ ನೀಡಿಲ್ಲವೆಂದು ದರ್ಶನ್ ತಕರಾರು ಸಂಬಂಧ. ಕೈದಿಗಳಿಗೆ ಟಿ.ವಿ ನೋಡಲು ಅವಕಾಶ ನೀಡಬಹುದು. ಆದರೆ, ಪ್ರತಿ ಬ್ಯಾರಕ್ಗೆ ಟಿ.ವಿ ನೀಡಬೇಕು ಎಂಬ ನಿಯಮವಿಲ್ಲ. ಫೋನ್ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಿಸುತ್ತಾರೆ ಎಂದು ದರ್ಶನ್ ಆಪಾದನೆಗೆ ಆರೋಪಿಗಳ ಮೇಲೆ ನಿಗಾ ಇಡುವ ದೃಷ್ಡಿಯಿಂದ ಕಾನೂನಿನಲ್ಲಿ ಅವಕಾಶವಿದೆ. ಆರೋಪಿಗಳಿಗೆ ತಿಳಿಸಿ ಫೋನ್ ಕಾಲ್ ರೆಕಾರ್ಡ್ಗೆ ನಿಯಮದಲ್ಲಿ ಅವಕಾಶವಿದೆ. ಈ ಬಗ್ಗೆ ಜೈಲಧಿಕಾರಿಗಳು ನಿಯಮ ರೂಪಿಸಿದ್ದಾರೆ ಎಂದು ವರದರಾಜು ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೂರ್ಯನ ಬೆಳಕಿಲ್ಲದೇ ಕಾಲಿಗೆ ಫಂಗಸ್ ಬಂದಿದೆ ಎಂಬ ದರ್ಶನ್ ಹೇಳಿದ್ದರು. ಪರಿಶೀಲನೆ ವೇಳೆ ಕಾಲಿನಲ್ಲಿ ಫಂಗಸ್ ಬಂದಿಲ್ಲ, ಹಿಮ್ಮಡಿಯಲ್ಲಿ ಬಿರುಕಿದೆ. ಈ ಬಗ್ಗೆ ಚರ್ಮರೋಗ ತಜ್ಞರು ಪರಿಶೀಲಿಸಿದ್ದಾರೆ. ಜೈಲಿನ ವೈದ್ಯಾಧಿಕಾರಿಗಳು ಎರಡು ದಿನಕ್ಕೊಮ್ಮೆ ಬ್ಯಾರಕ್ಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್ಗೆ ಫಿಸಿಯೋಥೆರಪಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸೊಳ್ಳೆ ಬತ್ತಿ, ಕನ್ನಡಿ, ಬಾಚಣಿಗೆ ನೀಡಿಲ್ಲವೆಂಬ ಆಪಾದನೆಗೆ, ಸಜಾ ಬಂಧಿಗಳಿಗೆ ಮಾತ್ರ ಇವುಗಳನ್ನು ಕೊಡಬಹುದು. ವಿಚಾರಣಾಧೀನ ಕೈದಿಗೆ ಕೊಡಲು ಜೈಲು ನಿಯಮದಲ್ಲಿ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.ಹೀಗೆ ದರ್ಶನ್ ಗೆ ಸೌಲಭ್ಯಗಳನ್ನು ಹೆಚ್ಚುಕಡಿಮೆ ನಿರಾಕರಿಸಿ,ನಿರಾಸೆ ಉಂಟಾಗುವಂತಾಗಿದೆ.