ಮೈಸೂರು: ಕೊಲೆಗೆ ಯತ್ನಿಸಿದ ಆರೋಪ ಮೇಲೆ ಐವರು ಅಪರಾಧಿಗಳಿಗೆ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಮೈಸೂರು ತಾಲ್ಲೂಕಿನ ಅರಗೌಡನಹಳ್ಳಿ ಬಳಿ ಶಿವಣ್ಣ, ಲೋಕೇಶ್, ಹೇಮಂತ್ ಹಾಗೂ ಅಭಿಷೇಕ್ ಎಂಬುವರ ಕೊಲೆಗೆ ಯತ್ನಿಸಿದ ಆರೋಪ ಮೇಲೆ ಐವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
ಡಿ.ಸಿ.ಕಾರ್ತಿಕ್ ಎಂಬಾತನಿಗೆ 5 ವರ್ಷ ಜೈಲು ಹಾಗೂ 10 ಸಾವಿರ ದಂಡ, ಕೀರ್ತಿ, ಅವಿನಾಶ್, ಕೆ.ಮನು, ಎಸ್.ಮನೋಜ್ ಅವರಿಗೆ 1 ವರ್ಷ ಜೈಲು ಹಾಗೂ 5 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ವರುಣ ಪೊಲೀಸ್ ಠಾಣೆ ವ್ಯಾಪ್ತಿಯ ಬಸವೇಶ್ವರ ನಗರ ಸಮೀಪ ಬಸವರಾಜು ಅವರ ಜಮೀನಿನ ತೆಂಗಿನ ಮರದಲ್ಲಿ ಎಳನೀರು ಕಳುವು ಮಾಡುವುದನ್ನು ಶಿವಣ್ಣ
ಎಂಬುವರು ವಿಡಿಯೊ ಮಾಡಿ ಬೇರೆಯವರಿಗೆ ಕಳುಹಿಸುತ್ತಾರೆಂದು ಕೀರ್ತಿ, ಪ್ರಸನ್ನ ಕುಮಾರ್ ಹಾಗೂ ಅವಿನಾಶ್ ಅವರು ಕಾರ್ತಿಕ್, ಮನು, ಮನೋಜ್ ಅವರನ್ನು ಫೋನ್ ಮಾಡಿ ಕರೆಸಿಕೊಂಡು ಸೈಜುಗಲ್ಲು ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದರು.
ವರುಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾ ರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಮಲ್ಲನಗೌಡ ಅವರು ಆರೋಪ ಸಾಬೀತಾದ ಕಾರಣ ಈ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರ ಪರ ವಕೀಲೆ ಎಸ್.ಟಿ.ಸುಧಾ ವಾದ ಮಂಡಿಸಿದರು.