ಫೆಂಗಲ್ ಪರಿಣಾಮ:ಚಾಮುಂಡಿ ಬೆಟ್ಟದಲ್ಲಿ ರಸ್ತೆಗೆ ಉರುಳಿ ಬಿದ್ದ ಭಾರೀ ಬಂಡೆ!

Spread the love

ಮೈಸೂರು: ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದಾಗಿ‌‌ ಮೈಸೂರಿನಲ್ಲಿ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿದ ಪರಿಣಾಮ ಚಾಮುಂಡಿ ಬೆಟ್ಟದಲ್ಲಿ ರಸ್ತೆಗೆ ಭಾರೀ ಬಂಡೆಯೊಂದು ಉರುಳಿ‌‌ ‌ಬಿದ್ದಿದೆ.

ಅದೃಷ್ಟ ವಶಾತ್‌ ಬಂಡೆ ಉರುಳಿದ ಸಮಯದಲ್ಲಿ ಕೂದಲೆಳೆ ಅಂತರದಲ್ಲಿ ಬೆಟ್ಟಕ್ಕೆ ಬರುತ್ತಿದ್ದ ಬಸ್ ಅಪಾಯದಿಂದ ಪಾರಾಗಿದೆ,ಬೇರೆ ಯಾವುದೆ ವಾಹನ ಸಂಚರಿಸಿರಲಿಲ್ಲ ಇಲ್ಲದಿದ್ದರೆ ಭಾರೀ ಅನಾಹುತ ಸಂಭವಿಸಿಬಿಡುತ್ತಿತ್ತು.

ತಾಯಿ ಚಾಮುಂಡೇಶ್ವರಿ ಕಾಪಾಡಿದ್ದಾಳೆ ಎಂದು ಸ್ಥಳೀರು ಮತ್ತು ಬಸ್ ನಲ್ಲಿದ್ದ ಪ್ರಯಾಣಿಕರು ಹೇಳುತ್ತಾರೆ.

ನಿರಂತರ ಮಳೆಗೆ ಬರೀ ಬಂಡೆಯಷ್ಟೇ ಅಲ್ಲ ಮಣ್ಣು,ಸಣ್ಣ,ಪುಟ್ಟ ಕಲ್ಲು ಬಂಡೆಗಳು ಕೂಡಾ ಚಾಮುಂಡಿ ಬೆಟ್ಟದ ಮುಖ್ಯ ರಸ್ತೆಗೆ ಉರುಳಿವೆ.

ಮಳೆಗೆ ಮಣ್ಣು ಸಡಿಲಗೊಂಡು ಬೆಟ್ಟದ ರಸ್ತೆಗೆ ಬಂಡೆಗಳು ಉರುಳಿದೆ.
ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ಬಂಡೆಗಳು ರಸ್ತೆಗುರುಳಿದ ಕಾರಣ ಸಂಚಾರಕ್ಕೆ ಕೆಲಕಾಲ ಅಡಚಣೆಯಾಯಿತು.ನಂತರ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಬಂಡೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡರು.

ಫೆಂಗಲ್ ಚಂಡಮಾರುತದ ಎಫೆಕ್ಟ್ ನಗರ ಪ್ರದೇಶದಲ್ಲೂ ಆಗಿದೆ.
ಜಿಟಿ ಜಿಟಿ ಮಳೆಗೆ ಏಕಕಾಲಕ್ಕೆ ಎರಡು ಮರಗಳು ಉರುಳಿ ಬಿದ್ದಿವೆ.

ಸರಸ್ವತಿಪುರಂನಲ್ಲಿ ನೆನ್ನೆ ಸಂಜೆ ಈ ಘಟನೆ ನಡೆದಿದ್ದು, ಮರ ಉರುಳಿದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಎರಡು‌ ಕಾರುಗಳು ಜಖಂಗೊಂಡಿವೆ.

ಮರ ಕಾರಿನ ಮೇಲೆ ಉರುಳಿ ಬಿದ್ದ ದೃಶ್ಯ ಸಿ‌‌ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.