ಯಾದಗಿರಿ: ಮಕ್ಕಳಿಗೆ ತಾಯಿ ದೇವತೆಯಾದರೆ ತಂದೆ ಕೂಡಾ ದೇವರ ಸಮಾನ,ಆದರೆ ಅಂತಹ ಸ್ಥಾನದಲ್ಲಿರು ಅಪ್ಪ ತನ್ನ ಇಬ್ಬರು ಮಕ್ಕಳನ್ನು ಕೊಂದ ಹೇಯ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಶರಣಪ್ಪ ದುಗನೂರ ಎಂಬ ವ್ಯಕ್ತಿ ತನ್ನದೇ ಮಕ್ಕಳನ್ನು ನಿರ್ದಯ ವಾಗಿ ಕೊಂದುಬಿಟ್ಟಿದ್ದಾನೆ.
ಈತ ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ.ಅದೇನಾಯಿತೊ ಗುರುವಾರ ಮುಂಜಾನೆ ಪತ್ನಿ ಬಹಿರ್ದೇಸೆಗೆ ಹೋಗಿದ್ದಾಗ ಮಂಚದ ಮೇಲೆ ಸಿಹಿ ನಿದ್ರೆಯಲ್ಲಿದ್ದ ಮೂರೂ ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.
ಇದರಿಂದ ಇಬ್ಬರು ಮಕ್ಕಳು ಮಲಗಿದ್ದಲ್ಲೇ ಮೃತಪಟ್ಟರೆ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ.
ಪುತ್ರ ಭಾರ್ಗವ(5), ಪುತ್ರಿ ಸಾನ್ವಿ(3) ಮೃತ ದುರ್ದೈವಿಗಳು.
ಗಾಯಗೊಂಡ ಹೇಮಂತ (8) ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ವೈಧ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳಿಸಲಾಗಿದೆ.
ಕೊಲೆ ಮಾಡಿ ನಂತರ ಪಾಪಿ ಅಪ್ಪ ಪರಾರಿಯಾಗಿದ್ದಾನೆ.
ಕೆಲವು ವರ್ಷಗಳಿಂದ ಶರಣಪ್ಪ ಹಾಗೂ ಪತ್ನಿ ಪದೇ ಪದೇ ಜಗಳವಾಡುತ್ತಿದ್ದರು, ಇದನ್ನು ಗಮನಿಸಿದ ಪತ್ನಿಯ ತಂದೆ-ತಾಯಿ ಸ್ವಗ್ರಾಮ ಕೊಡ್ಲಾಕ್ಕೆ ೮ ತಿಂಗಳ ಹಿಂದೆ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.
ನಂತರ ರಾಜಿ ಪಂಚಾಯಿತಿ ಮಾಡಲಾಗಿತ್ತು.
ಶರಣಪ್ಪನಿಗೆ ಸ್ವಲ್ಪ ಮಾನಸಿಕ ರೋಗವಿದ್ದುದರಿಂದ ಚಿಕಿತ್ಸೆ ಕೊಡಿಸಿ ಸರಿಯಾಗಿರುವುದಾಗಿಯೂ ಪತ್ನಿ ಜೊತೆ ಸಂಸಾರ ಮಾಡುವುದಾಗಿ ತಿಳಿಸಿದ್ದರಿಂದ ಇತ್ತೀಚೆಗೆ ಪತ್ನಿ ಮಕ್ಕಳನ್ನು ಹತ್ತಿಕುಣಿಗೆ ಕರೆ ತರಲಾಗಿತ್ತು.
ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಗ್ರಾಮೀಣ ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ನೀಡಿ, ಪರಿಶೀಲಿಸಿದರು.
ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.