ದೇವನಹಳ್ಳಿ ರೈತರ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ

Spread the love

ಬೆಂಗಳೂರು: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 495 ಎಕರೆ ರೈತರ ಜಮೀನು ಭೂಸ್ವಾಧೀನ ವಿರೋಧಿಸುವ ರೈತರ ಹೋರಾಟದಕ್ಕೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.

ಇಂದು ಹೋರಾಟದಲ್ಲಿ ಆಪ್ ಪದಾಧಿಕಾರಿಗಳು ಗಭಾಗವಹಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ರೈತರ ಹೋರಾಟದಲ್ಲಿ ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು , ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಹಾಗೂ ಇನ್ನಿತರ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಧರಣಿ ಸತ್ಯಾಗ್ರಹದ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ನುಡಿದಂತೆ ನಡೆಯುವ ಸರ್ಕಾರವೆಂದು ಪದೇ ಪದೇ ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದಲ್ಲಿ ಇದ್ದಾಗ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿತ್ತು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ತಮ್ಮ ನಿಲುವನ್ನು ಬದಲಾಯಿಸಿ ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡಗಳಿಗೆ ಬಲಿಯಾಗಿರುವುದು ನಿಜಕ್ಕೂ ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.

ಕೊನೆಗೂ ರೈತರ ಹೋರಾಟಕ್ಕೆ ಮಣಿದಿರುವ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟಿರುವುದು ನಮಗೆಲ್ಲರಿಗೂ ಸಂದ ಜಯ. ರಾಜ್ಯದಲ್ಲಿ ಎಲ್ಲೇ ಆದರೂ ಈ ರೀತಿಯ ಅಕ್ರಮ ಭೂಸ್ವಾಧೀನವನ್ನು ನಮ್ಮ ಪಕ್ಷ ಸದಾ ವಿರೋಧಿಸಿ ರೈತರ ಜೊತೆಯಲ್ಲಿ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಆಪ್ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಕೆ ಐ ಎ ಡಿ ಬಿ ಯು ರಿಯಲ್ ಎಸ್ಟೇಟ್ ಮಾಫಿಯಾಗಳ ಅಡ್ಡೆ ಯಾಗಿದೆ. ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕೈಗಾರಿಕೆಗಳ ಸ್ಥಾಪನೆ ಹೆಸರಿನಲ್ಲಿ ಭ್ರಷ್ಟರು ಹಾಗೂ ಪ್ರಭಾವಿ ರಾಜಕಾರಣಿಗಳು ಬಡ ರೈತರ ಜಮೀನುಗಳನ್ನು ಕಿತ್ತುಕೊಂಡು ಸಹಸ್ರಾರು ಕೋಟಿ ರೂ ಕೊಳ್ಳೆ ಹೊಡೆಯುತ್ತಿದ್ದಾರೆ, ಈ ಅಕ್ರಮಗಳ ವಿರುದ್ಧ ಆಮ್ ಆದ್ಮಿ ಪಕ್ಷವು ಸದಾ ಹೋರಾಟದಲ್ಲಿ ರೈತರ ಜೊತೆ ನಿಲ್ಲುತ್ತದೆ ಎಂದು ಹೇಳಿದರು.

ಧರಣಿ ಸತ್ಯಾಗ್ರಹದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ಸುರೇಶ್, ಮಾಲೂರು, ನಾಗರಾಜ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹೋರಾಟದಲ್ಲಿ ರೈತರ ಪರವಾಗಿ ಪಾಲ್ಗೊಂಡಿದ್ದ ಬಹುಭಾಷಾ ನಟ‌ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರು ಮುಖ್ಯ ಮಂತ್ರಿ ಚಂದ್ರು ಅವರಿಗೆ ನಮಸಿ ಮಾತುಕತೆ ನಡೆಸಿದರು.