ನಕಲಿ ದಾಖಲೆ ನೀಡಿ 66 ಲಕ್ಷ ರೂ ಸಾಲ ಪಡೆದು ಎಸ್ ಬಿ ಐ ಗೆ ವಂಚನೆ!

Spread the love

ಮೈಸೂರು: ನಕಲಿ ದಾಖಲೆಗಳ ಮೂಲಕ ಎಸ್‌ಬಿಐ ಸಿಬ್ಬಂದಿಯನ್ನೇ ದಾರಿ ತಪ್ಪಿಸಿದ ಏಳು ಮಂದಿ ಸುಮಾರು 66 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಎನ್‌ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ವಂಚಿಸಿರುವ ಬೋಗಾದಿಯ ನಾಗೇಶ್, ಕೆ ಜಿ ಕೊಪ್ಪಲಿನ ಮಂಜಣ್ಣ, ಗಾಂಧಿನಗರದ ಸಣ್ಣಪ್ಪ, ಬೋಗಾದಿಯ ನವೀನ್‌ಕುಮಾರ್, ಜಯನಗರದ ದೀಪಾ, ಕ್ಯಾತಮಾರನಹಳ್ಳಿಯ ಶ್ರೀನಿವಾಸ್ ಹಾಗೂ ಮಂಡಿ ಮೊಹಲ್ಲಾದ ಮಂಜುನಾಥ್ ಎಂಬವರ ವಿರುದ್ಧ ಬ್ಯಾಂಕ್‌ನ ವ್ಯವಸ್ಥಾಪಕಿ ರಮ್ಯ ಎಂಬವರು ದೂರು ನೀಡಿದ್ದಾರೆ.

ಆರೋಪಿಗಳು ಸಾಲ ಪಡೆಯುವ ಉದ್ದೇಶದಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ದಿನಾಂಕಗಳಂದು ಎಸ್‌ಬಿಐ ಬ್ಯಾಂಕ್‌ಗೆ ನಕಲಿ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಅವುಗಳ ಆಧಾರದ ಮೇಲೆ ಅವರುಗಳಿಗೆ ಸಾಲ ನಿಡಲಾಗಿದೆ.ನಾಗೇಶ್ ಎಂಬವರು ೯.೪೦ ಲಕ್ಷ ರೂ., ಮಂಜಣ್ಣ ಎಂಬವರು ೯.೫೫ ಲಕ್ಷ ರೂ., ಸಣ್ಣಪ್ಪ ಅವರು ೧೦ ಲಕ್ಷ ರೂ., ನವೀನ್‌ಕುಮಾರ್ ೯,೨೫ ಲಕ್ಷ ರೂ., ದೀಪಾ ೯.೨೫ ಲಕ್ಷ ರೂ., ಶ್ರೀನಿವಾಸ್ ೯.೨೦ ಲಕ್ಷ ರೂ., ಮಂಜುನಾಥ್ ಎಂಬವರು ೯.೩೦ ಲಕ್ಷ ರೂ. ಸಾಲ ಪಡೆದಿದ್ದಾರೆ.

ನಂತರ ಅವರುಗಳು ಸಕಾಲಕ್ಕೆ ಕಂತನ್ನು ಪಾವತಿಸಿಲ್ಲ ಎನ್ನಲಾಗಿದೆ. ಇದೇ ವೇಳೆ ಅವರ ದಾಖಲಾತಿಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಕೆಲವು ನಕಲಿ ಎಂಬುದು ಗೊತ್ತಾಗಿದೆ. ಹಾಗಾಗಿ ರಮ್ಯ ಅವರು ಏಳು ಮಂದಿ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.