ಯಾದಗಿರಿ: ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಿಸಿಪಿಎನ್ ಡಿಟಿ ಹಾಗೂ ಕೆ.ಪಿ.ಎಮ್.ಇ ಕಾಯ್ದೆಯಡಿ ಕೋರಿ ಬಂದಿರುವ ಅರ್ಜಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ವೈದ್ಯಕೀಯ ಪದವಿಗಳಿಲ್ಲದೇ ನಕಲಿ ವೈದ್ಯರಿಂದ ಚಿಕಿತ್ಸೆಗೆ ಒಳಗಾಗಿ ಬಡ ಜನರ ಜೀವಕ್ಕೆ ಅಪಾಯವಾಗಬಾರದು, ಮುಗ್ಧ ಜನರಿಗೆ ಮತ್ತು ಬಡ ಜನರಿಗೆ ಅಪಾಯವಾಗದಂತೆ ನೋಡಿಕೊಳ್ಳಬೇಕು, ನೋಂದಾಯಿತವಲ್ಲದ ಆಸ್ಪತ್ರೆ ಹಾಗೂ ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಆಸ್ಪತ್ರೆ ಗಳಿಗಾಗಿ ಬಾಡಿಗೆ ಮನೆಗಳನ್ನೂ ನೀಡಬಾರದೆಂದು ಸಾರ್ವಜನಿಕರಿಗೂ ತಾಕೀತು ಮಾಡಿದರು.
ಒಂದು ವೇಳೆ ಅಂತಹವರಿಗೆ ಬಾಡಿಗೆ ಮನೆ ಅಥವಾ ಕಟ್ಟಡ ಒದಗಿಸಿದ ಬಗ್ಗೆ ಗೊತ್ತಾದಲ್ಲಿ,ಅಂತಹವರ ಕಟ್ಟಡಕ್ಕೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತದಂತಹ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿನ ಅಧಿಕೃತ ಹಾಗೂ ಅನಧಿಕೃತ ಆಸ್ಪತ್ರೆಗಳ ಪರಿಶೀಲನೆಗಾಗಿ, ಅನಿರೀಕ್ಷಿತವಾಗಿ ತಂಡದೊಂದಿಗೆ ಭೇಟಿ ನೀಡಬೇಕು,ಸಾರ್ವಜನಿಕ ದೂರುಗಳ ಜೊತೆಗೆ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳು ತಂಡದೊಂದಿಗೆ ಇರಬೇಕು ಎಂದು ಹೇಳಿದರು.
ವೈದ್ಯಕೀಯ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ನಿಗಾವಹಿಸಲು ಪೋಲಿಸ್ ಹಾಗೂ ಆರೋಗ್ಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸುಶೀಲಾ ಸೂಚಿಸಿದರು.
ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯಡಿ ಅನಧಿಕೃತವಾಗಿ ಅಲ್ಟ್ರಾಸೋನೋಗ್ರಾಫಿ ಮಶೀನ್ ಬಳಸುವದಾಗಲಿ, ಆಸ್ಪತ್ರೆ ನಡೆಸುವುದಾಗಲಿ ಶಿಕ್ಷಾರ್ಹ ಅಪರಾಧವಾಗಿದೆ.ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಹಣುಮಂತರೆಡ್ಡಿ, ಡಾ.ರಮೇಶ, ಸರ್ಕಾರಿ ರೇಡಿಯಾಲಾಜಿಸ್ಟ್ ಡಾ.ಶಾಂತಲಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುಗೂರಪ್ಪ ಮತ್ತಿತರರು ಉಪಸ್ಥಿತರಿದ್ದರು.