ಧನಂಜಯ ನಿಶಾನೆ ಆನೆ, ಗೋಪಿ ನೌಪತ್: ಖಂಡ್ರೆ ಘೋಷಣೆ

ಮೈಸೂರು: ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಧನಂಜಯ ನಿಶಾನೆ ಆನೆಯ ಕಾರ್ಯ ನಿರ್ವಹಿಸಲಿದ್ದು, ಗೋಪಿ ಆನೆ ನೌಪತ್ ಆನೆಯ ಸ್ಥಾನ ಪಡೆದಿದ್ದಾನೆ ಎಂದು ಸಚಿವ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಈ ಕುರಿತು ವಿವರ ನೀಡಿದ ಸಚಿವರು, ಮಹೇಂದ್ರ, ಶ್ರೀಕಂಠ ಮತ್ತು ಲಕ್ಷ್ಮೀ ಸಾಲಾನೆ 1ನೇ ತಂಡದಲ್ಲಿದ್ದರೆ, ಕಂಜನ್, ಭೀಮ, ಏಕಲವ್ಯ ಸಾಲಾನೆ 2ರಲ್ಲಿ ಸಾಗಲಿವೆ ಎಂದು ತಿಳಿಸಿದರು.

ಸಾಲಾನೆ 3ರ ತಂಡದಲ್ಲಿ ಪ್ರಶಾಂತ್, ಸುಗ್ರೀವ, ಹೇಮಾವತಿ ಇದ್ದರೆ, ಅಂಬಾರಿ ಹೊತ್ತು ಸಾಗುವ ಅಭಿಮನ್ಯುವಿನ ಅಕ್ಕ ಪಕ್ಕದಲ್ಲಿ ಕಾವೇರಿ ಮತ್ತು ರೂಪಾ ಹೆಣ್ಣಾನೆಗಳು ಹೆಜ್ಜೆ ಹಾಕಲಿವೆ ಎಂದು ಹೇಳಿದರು.

ವಸ್ತುಪ್ರದರ್ಶನ ಆವರಣದಲ್ಲಿ ಸೋಮವಾರ ರಾತ್ರಿ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು.

ಈ ಮಳಿಗೆಯಲ್ಲಿ ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿಗಳ ರಕ್ಷಣೆ ಮತ್ತು ಪುನರ್ವಸತಿ, ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂವರ್ಧನೆ ಕುರಿತ ಮಾಹಿತಿಯ ಜೊತೆಗೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಸೆರೆ ಕಾರ್ಯಾಚರಣೆ, ಕಾಡ್ಗಿಚ್ಚು ನಂದಿಸುವ ಹಾಗೂ ಕಾಡುಗಳ್ಳರೊಂದಿಗೆ ಹೋರಾಡಿ ಮೃತಪಟ್ಟ ಅರಣ್ಯ ಹುತಾತ್ಮರ ಮಾಹಿತಿಯೂ ಇದ್ದು, ಸಚಿವರು ಈ ವಸ್ತುಪ್ರದರ್ಶನ ವೀಕ್ಷಿಸಿ, ಹುತಾತ್ಮರಿಗೆ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರು ಸಚಿವ ಈಶ್ವರ ಬಿ ಖಂಡ್ರೆ ಅವರನ್ನು ಗೌರವಿಸಿದರು.

ನಂತರ ಮೈಸೂರಿನ ಕಲಾ ಮಂದಿರದಲ್ಲಿ ಏರ್ಪಡಿಸಿರುವ ವಿವಿಧ ಪತ್ರಿಕೆಗಳ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವನ್ನೂ ಖಂಡ್ರೆ ವೀಕ್ಷಿಸಿ ಪ್ರಶಂಸಿಸಿದರು.