ಬೆಂಗಳೂರು: ಅವೈಜ್ಞಾನಿಕ ನೀತಿಗಳ ಮೂಲಕ ಅಬಕಾರಿ ಆದಾಯದ ಮೂಲಕ್ಕೆ ಕೊಡಲಿ ಪೆಟ್ಟು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಕಿಡಿಕಾರಿದ್ದಾರೆ.
ಅವೈಜ್ಞಾನಿಕ ಆರ್ಥಿಕ ನೀತಿಗಳಿಂದ ದಿವಾಳಿ ಸ್ಥಿತಿ ತಲುಪಿರುವ ರಾಜ್ಯ ಸರ್ಕಾರ ಸಂಪನ್ಮೂಲ ಸಂಗ್ರಹಕ್ಕೆ ಅನುಸರಿಸುತ್ತಿರುವ ಮಾರ್ಗ ಉದ್ಯಮಕ್ಕೆ ಮಾರಕವಾಗಿದೆ ಎಂದು ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಶೋಕ್, ದರ ಮತ್ತು ಸನ್ನದು ಶುಲ್ಕ ಏರಿಕೆಗೂ ಒಂದು ಮಾನದಂಡ ಇರುತ್ತದೆ. ಆದರೆ ಒಂದೇ ವರ್ಷದಲ್ಲಿ ಮದ್ಯ ಮಾರಾಟ ಮತ್ತು ಸನ್ನದು ಶುಲ್ಕವನ್ನು ಅಡ್ಡಾದಿಡ್ಡಿ ಹೆಚ್ಚಿಸುತ್ತಿರುವುದರಿಂದ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
ಬಜೆಟ್ ನಲ್ಲಿ ಯಾವುದೇ ತೆರಿಗೆ ಹಾಕಿಲ್ಲ ಎಂದು ಬೆನ್ನು ತಟ್ಟಿಕೊಂಡು ನಂತರದಲ್ಲಿ ಆಲ್ಕೊಹಾಲ್ ದರಗಳನ್ನು ಯದ್ವಾತದ್ವಾ ಹೆಚ್ಚಿಸಿದ್ದಾರೆ. ಅದರಲ್ಲೂ ಬಿಯರ್ ದರವನ್ನು ವರ್ಷದಲ್ಲಿ ಎರಡೂ – ಮೂರು ಸಲ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ದೊಡ್ಡ ಹೊರೆ ಹೊರಿಸಲಾಗಿದೆ. ಮದ್ಯಪ್ರಿಯರು ಪ್ರತಿಭಟಿಸುವುದಿಲ್ಲ ಎಂಬ ಕಾರಣಕ್ಕೆ ಇಂತಹ ಕ್ರಮ ಅನುಸರಿಸುವುದು ಒಳ್ಳೆಯದಲ್ಲ ಎಂದು ಅಶೋಕ್ ಹೇಳಿದ್ದಾರೆ.
ಸರಿಯಾದ ಆರ್ಥಿಕ ಶಿಸ್ತು ಮತ್ತು ಸಿದ್ಧತೆಗಳಿಲ್ಲದೆ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತ ಗೊಂಡಿವೆ. ಬೊಕ್ಕಸ ಬರಿದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸಿದ್ದಾರೆ.
ಇದನ್ನು ಹೇಗಾದರೂ ಸರಿಪಡಿಸಿಕೊಳ್ಳಲು ಹೆಣಗುತ್ತಿರುವ ಸರ್ಕಾರ, ಸಿಕ್ಕ ಸಿಕ್ಕ ಎಲ್ಲ ವಸ್ತುಗಳ ದರ ಹೆಚ್ಚಳ ಮಾಡಿದೆ. ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ
ಮದ್ಯ ಉತ್ಪಾದನೆ, ಬಾಟ್ಲಿಂಗ್, ಮಾರಾಟ ಮಳಿಗೆಗಳು ಸೇರಿ ಎಲ್ಲ ಸ್ವರೂಪದ ಶುಲ್ಕಗಳನ್ನು ಶೇಕಡಾ ನೂರರಷ್ಟು ಹೆಚ್ಚಳಕ್ಕೆ ಮುಂದಾಗಿದೆ. ಇದಕ್ಕಾಗಿ ಅಬಕಾರಿ ಕಾನೂನುಗಳಿಗೆ ತಿದ್ದುಪಡಿ ಮಾಡಿ ಕರಡು ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿದೆ. ಜುಲೈ 1 ರಿಂದ ಪರಿಷ್ಕೃತ ದರಗಳು ಜಾರಿಗೊಳ್ಳಲಿವೆ. ಆ ಮೂಲಕ ಉದ್ಯಮದ ನಾಶಕ್ಕೆ ಮೊಳೆ ಹೊಡೆದಂತಾಗಲಿದೆ ಎಂದಿದ್ದಾರೆ.
ಉದ್ಯಮದ ಹಿತದೃಷ್ಟಿಯಿಂದ ಸರ್ಕಾರ ಅವೈಜ್ಞಾನಿಕ ಕ್ರಮಗಳನ್ನು ಬಿಟ್ಟು ಉದ್ಯಮ, ಮಾರಾಟಗಾರರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು. ಸನ್ನದು ಶುಲ್ಕ ಪರಿಷ್ಕರಣೆಯನ್ನು ಮರು ಪರಿಶೀಲಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.