ಬೆಂಗಳೂರು: ಕೇಂದ್ರ ಸರ್ಕಾರವು ನ್ಯಾಯಾಲಯ ಕಲಾಪಗಳನ್ನು ಸಂಜೆ 5 ರಿಂದ 9 ರ ತನಕ ವಿಸ್ತರಿಸಿ ಸಂಜೆ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧಿಸಿದೆ.
ಸಂಜೆ ನ್ಯಾಯಾಲಯಗಳನ್ನು ಸ್ಥಾಪಿಸುವುದು
ಸಂಪೂರ್ಣ ವೈಜ್ಞಾನಿಕ ಹಾಗೂ ವಕೀಲರ ವೃತ್ತಿಪರತೆಗೆ ಮಾಡುತ್ತಿರುವ ದ್ರೋಹ, ಯಾವುದೇ ಕಾರಣಕ್ಕೂ ಸಂಜೆ ನ್ಯಾಯಾಲಯಗಳನ್ನು ಮಾಡಲು ಬಿಡುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥ ಲಕ್ಷ್ಮಿಕಾಂತರಾವ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದ ಅವರು,1999 ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಕಾನೂನು ಸಚಿವರಾಗಿದ್ದ ರಾಮ್ ಜೇಠ್ಮಲಾನಿ ಇದೇ ರೀತಿಯ ಪ್ರಸ್ತಾಪವನ್ನು ತಂದಿದ್ದರು. ಅಂದು ವಕೀಲರುಗಳ ಪ್ರತಿಭಟನೆಯಿಂದ ಈ ನಿರ್ಣಯವನ್ನು ಹಿಂಪಡೆಯಲಾಗಿತ್ತು ಎಂದು ತಿಳಿಸಿದರು.
ಈಗ ಮತ್ತೆ ಸಂಜೆ ನ್ಯಾಯಾಲಯಗಳನ್ನು ಮರು ಸ್ಥಾಪಿಸ ಹೊರಟಿರುವುದು ನಿಜಕ್ಕೂ ಖಂಡನೀಯ,ಇದು ಸಂವಿಧಾನದ 22 ನೆ ವಿಧಿಯ ಸಂಪೂರ್ಣ ಉಲ್ಲಂಘನೆ ಆಗುತ್ತದೆ ಎಂದು ಹೇಳಿದರು.
ನ್ಯಾಯಾಲಯಗಳು ಎಂದಿಗೂ ನ್ಯಾಯ ದೇಗುಲಗಳೆ ಹೊರತು ಉತ್ಪಾದಿಸುವ ಕಾರ್ಖಾನೆಗಳಲ್ಲ, ಕಕ್ಷಿದಾರರು ತಮ್ಮ ವಕೀಲರುಗಳನ್ನು ನೇಮಿಸಿಕೊಳ್ಳಲು ಸಾಧ್ಯವೇ ಆಗದಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದು ಲಕ್ಷ್ಮಿಕಾಂತರಾವ್ ತಿಳಿಸಿದರು.
ಸಂಜೆಯ ಮೇಲೆ ವಕೀಲರು ತಮ್ಮ ಕಕ್ಷಿದಾರರ ಅಹವಾಲು ಗಳನ್ನು ಆಲಿಸಲು,ಚರ್ಚಿಸಲು, ನಿರ್ಧಾರ ತೆಗೆದುಕೊಳ್ಳಲು ಹಾಗೂ ಮರು ದಿವಸದ ಕೇಸ್ ಫೈಲ್ ಗಳನ್ನು ತಯಾರು ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಕುಟುಂಬಗಳೊಂದಿಗೆ ಸಮಯವನ್ನು ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ಈಗಾಗಲೇ ಇರುವಾಗ ಇಂತಹ ಅವೈಜ್ಞಾನಿಕ ನಿರ್ಧಾರ ಸಹಿಸಲು ಸಾಧ್ಯವಿಲ್ಲ ಎಂದು ಅಸನಾಧಾನ ವ್ಯಕ್ತಪಡಿಸಿದರು.
ಸರ್ಕಾರಗಳಿಗೆ ನಿಜವಾಗಲೂ ಕೇಸುಗಳನ್ನು ಶೀಘ್ರ ವಿಲೇವಾರಿ ಮಾಡಬೇಕಾದ ಮನಸ್ಸಿದ್ದಲ್ಲಿ ಕೂಡಲೇ ಖಾಲಿ ಇರುವ ನ್ಯಾಯಾಂಗ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು, ನಿವೃತ್ತ ನ್ಯಾಯಾಧೀಶರು, ಟೈಪಿಸ್ಟ್ ಗಳು ಹಾಗೂ ಸ್ಟೆನೋಗ್ರಾಫರ್ ಗಳನ್ನು ನ್ಯಾಯಾಂಗಗಳ ಕಲಾಪಗಳಲ್ಲಿ ನೆರವು ನೀಡಲು ಬಳಸಿಕೊಳ್ಳಬೇಕು ಹೀಗಾದಲ್ಲಿ ಮಾತ್ರ ಮೊಕದ್ದಮೆಗಳ ಶೀಘ್ರ ವಿಲೇವಾರಿಯಾಗಲು ಸಾಧ್ಯ,ಅದು ಬಿಟ್ಟು ಕೇಂದ್ರ ಸರ್ಕಾರ ಇಂತಹ ವ್ಯತಿರಿಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ಲಕ್ಷ್ಮಿಕಾಂತ್ ರಾವ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾನೂನು ವಿಭಾಗದ ವಕೀಲ ಹಾಗೂ ರಾಜ್ಯ ಉಪಾಧ್ಯಕ್ಷ ನಂಜಪ್ಪ ಕಾಳೇಗೌಡ, ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ಉಪಸ್ಥಿತರಿದ್ದರು.