ನೆರವಿಗೆ ಇಪಿಎಸ್ 95. ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಿಎಂ ಗೆ ಮನವಿ

Spread the love

ಮೈಸೂರು: ಇ.ಪಿ.ಎಫ್ ಅಡಿ ನಿವೃತ್ತರಾದ ನೌಕರರಿಗೆ ದೈನಂದಿನ ಜೀವನ ನಡೆಸಲು ನೆರವು ನೀಡಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ
ಇಪಿಎಸ್ 95. ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಮನವಿ ಸಲ್ಲಿಸಿದ್ದಾರೆ.

ಡಿ.ಸಿ.ಸಿ. ಬ್ಯಾಂಕ್, ಕೆ.ಎಮ್.ಎಫ್ ಹಾಲು ಒಕ್ಕೂಟಗಳು, ಕೆ.ಎಸ್.ಆರ್.ಟಿ.ಸಿ., ಜೆ.ಕೆ. ಟೈರ್, ಬಿ.ಇ.ಎಮ್.ಎಲ್.. ಮೈಸೂರು ಮೃಗಾಲಯ, ಆನೇಕ ನಿಗಮಗಳು ಸೇರಿದಂತೆ ರಾಜ್ಯ ಮಟ್ಟದ ಅನೇಕ ಕೈಗಾರಿಕಾ ಸಂಸ್ಥೆ ಇತ್ಯಾದಿಗಳಲ್ಲಿ 30-40 ವರ್ಷಗಳ ಕಾಲ ದುಡಿದು ನಿವೃತ್ತರಾಗಿದ್ದೇವೆ. ನಾವುಗಳು ನಮ್ಮ ಸಂಸ್ಥೆಗಳ ನಿಯಮಾನುಸಾರ ಕಾಯ್ದೆಯಡಿ ಬರುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ನಾವು ಸೇವೆಯಲ್ಲಿದ್ದಾಗ ಸರ್ಕಾರಕ್ಕೆ ಸಲ್ಲಿಸಬೇಕಾಗಿದ್ದ ತೆರಿಗೆ ಪಾವತಿಸಿದ್ದೇವೆ. ಇ.ಪಿ.ಎಸ್. 95 ಕಾರ್ಮಿಕ ಭವಿಶ್ಯನಿಧಿ ಯೋಜನೆ ಜಾರಿಗೆ ಬಂದಾಗಿನಿಂದ ಪಿ.ಎಫ್. ನಿಧಿಗೆ 417 ರಿಂದ 1250 ರೂ ತನಕ ವಂತಿಗೆಯನ್ನು ಕಟ್ಟಿದ್ದೇವೆ.

2014ರಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಪಿಂಚಣಿಯನ್ನು 1000ರೂ ಹೆಚ್ಚುವರಿ ಮಾಡಿದೆ ಈಗಲೂ ಲಕ್ಷಾಂತರ ನಿವೃತ್ತರು ಕನಿಷ್ಠ ಪಿಂಚಣಿ 500 ರೂ ನಿಂದ 600 ರೂ ಪಡೆಯುತ್ತಿದ್ದಾರೆ. ವಯೋವೃದ್ಧರಾದ ಪತಿ ಪತ್ನಿಯರಿಗೆ ಒಂದು ಹೊತ್ತು ಊಟಕ್ಕೂ ಗತಿ ಇಲ್ಲದೆ ಜೀವನ ಸಾಗಿಸುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಎಲ್ಲದರ ಬೆಲೆ ಹೆಚ್ಚಾಗಿದ್ದು, ವರಮಾನವೂ ಇಲ್ಲದಿರುವುದರಿಂದ ನಮಗೆ ಬದುಕು ಸಾಗಿಸಲು ಬಹಳ ಕಷ್ಟವಾಗಿದೆ. ರಾಜ್ಯದಲ್ಲಿ ಸರ್ಕಾರಿ ನಿವೃತ್ತ ನೌಕರರಿಗೆ ಸಿಗುವ ರೀತಿ ನಮಗೆ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ. ಆದರೆ ಪಿ.ಎಫ್. ನಿಂದ ನಮಗೆ ಕೇವಲ ಮಾಸಿಕ ರೂ 500 ರಿಂದ 2000 ಮಾತ್ರ ಮಾಸಿಕ ಪಿಂಚಣಿ ಬರುತ್ತಿದೆ. ಈ ಅಲ್ಪ ಮೊತ್ತದ ಪಿಂಚಣಿಯಿಂದ ದೈನಂದಿನ ಜೀವನ ನಡೆಸಲು ಕಷ್ಟವಾಗಿದ್ದು ನಮಗೂ ನೆರವು ನೀಡಬೇಕು ಎಂದು ನಿವೃತ್ತ ನೌಕರರು ಕೋರಿದ್ದಾರೆ.

ನೆರೆಯ ರಾಜ್ಯವಾದ ಆಂಧ್ರಪ್ರದೇಶ, ಪಶ್ಚಿಮಬಂಗಾಳ ಮತ್ತು ಹರಿಯಾಣ ರಾಜ್ಯಗಳಲ್ಲಿ ಈಗಾಗಲೇ ಪಿಂಚಣಿಯನ್ನು ರ 3000 ರೂಗೆ ಹೆಚ್ಚಿಸಿದ್ದಾರೆ ಆದ್ದರಿಂದ ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟವರಲ್ಲಿ ಚರ್ಚಿಸಿ, ರಾಜ್ಯದಲ್ಲಿ ನೀಡುತ್ತಿರುವಂತೆ ಇ.ಪಿಎಫ್. ವ್ಯಾಪ್ತಿಗೆ ಒಳಪಟ್ಟ ಎಲ್ಲಾ ನಿವೃತ್ತ ನೌಕರರಿಗೆ ಸರ್ಕಾರದ ವತಿಯಿಂದ ಕನಿಷ್ಠ ಮಾಸಿಕ ರೂ 5000 ರೂ ನಂತೆ ವೃದ್ದಾಪ್ಯ ವೇತನ ಲಭಿಸುವಂತೆ ಮಾಡಿಕೊಡಬೇಕೆಂದು ಕೋರಿದ್ದಾರೆ.

ಎಲ್ಲಾ ಇ.ಪಿ.ಎಫ್. ವ್ಯಾಪ್ತಿಗೆ ಒಳಪಟ್ಟ ನಿವೃತ್ತ ನೌಕರರಿಗೆ ಬಿ.ಪಿ.ಎಲ್. ಕಾರ್ಡ್, ಉಚಿತ ಬಸ್ ಪಾಸ್ ಮತ್ತು ಉಚಿತ ಆರೋಗ್ಯ ಸೌಲಭ್ಯ ಒದಗಿಸಿಕೊಡಬೇಕೆಂದು ಇಪಿಎಸ್ 95. ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮೈಸೂರು,ಅಧ್ಯಕ್ಷ ಸ್ವಾಮಿಶೆಟ್ಟಿ ಜಿ.,ಮತ್ತು
ಪ್ರಧಾನ ಕಾರ್ಯದರ್ಶಿ ಮೋಹನ್ ಕೃಷ್ಣ ಅವರು ಸಂಘದ ಪದಾದಿಕಾರಿಗಳ ಪರವಾಗಿ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.