ನವದೆಹಲಿ: ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡಲು ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದ ರೂಪಿಸಲಾದ 4,150 ಕೋಟಿ ಮೊತ್ತದ ಹೂಡಿಕೆ ಯೋಜನೆಯನ್ನು ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ನವದೆಹಲಿಯ ಸಚಿವಾಲಯದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕೆ, ದೇಶದಲ್ಲಿ ಭೂ ಸಾರಿಗೆ ಕ್ಷೇತ್ರದಲ್ಲಿ ಇಂಗಾಲದ ಹೊರ ಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ಪ್ರಧಾನಿಗಳ ಸಂಕಲ್ಪವನ್ನು ಈಡೇರಿಸುವ ಗುರಿಯೊಂದಿಗೆ ಈ ಹೂಡಿಕೆ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ರಸ್ತೆಗಿಳಿಸುವ ನಿಟ್ಟಿನಲ್ಲಿ ರೂಪಿಸಲಾದ ಈ ಯೋಜನೆ ಇದಾಗಿದೆ, ಈ ಯೋಜನೆಯು ಜಾಗತಿಕ ಮಟ್ಟದ ಎಲೆಕ್ಟ್ರಿಕ್ ವಾಹನ ತಯಾರಕರನ್ನು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ದೇಶಿಯವಾಗಿಯೇ ಕಾರುಗಳನ್ನು ತಯಾರಿಸಲು ಆಕರ್ಷಿಸುವ ಗುರಿಯನ್ನು ಹೊಂದಿದೆ. ಮೂರು ವರ್ಷಗಳಲ್ಲಿ 4,150 ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಈ ಯೋಜನೆಯು ಪ್ರಯಾಣಿರ ವಾಹನ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಪ್ರಧಾನಮಂತ್ರಿಗಳ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಆರ್ಥಿಕ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಈ ಮೂರು ಗುರಿಗಳನ್ನು ಒಟ್ಟೊಟ್ಟಿಗೆ ಸಾಕಾರಗೊಳಿಸುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಅವರು ಹೇಳಿದರು.
ಈ ಯೋಜನೆಯು ಭಾರತದ ಆಟೋಮೋಟಿವ್ ವಲಯಕ್ಕೆ ಒಂದು ದಿಕ್ಕನ್ನೇ ಬದಲಾಯಿಸುವಂತಿದೆ. ವಿಶೇಷವಾಗಿ ಇದು ಇಂಗಾಲ ಹೊರಸೂಸುವಿಕೆ ತಡೆಯುವುದು ಮತ್ತು ವಿದ್ಯುತ್ ಚಲನಶೀಲತೆಯ ಕಡೆಗೆ ಜಾಗತಿಕ ಪ್ರವೃತ್ತಿಗಳಿಗೆ ಹೊಂದಿಕೆಯಾಗುವುದರಿಂದ ಬಲವಾದ ಪ್ರೋತ್ಸಾಹ, ಕಟ್ಟುನಿಟ್ಟಾದ ಸ್ಥಳೀಕರಣ ಮಾನದಂಡಗಳು ಮತ್ತು ಮೇಕ್ ಇನ್ ಇಂಡಿಯಾಗೆ ಸ್ಪಷ್ಟ ಬದ್ಧತೆಯೊಂದಿಗೆ, ಈ ಯೋಜನೆಯನ್ನು ಜಗತ್ತಿನ ಕೆಲ ಉನ್ನತ ವಿದ್ಯುತ್ ತಯಾರಕರು ದೇಶದಲ್ಲಿ ಘಟಕಗಳನ್ನು ಸ್ಥಾಪಿಸಲು ಒಂದು ಕಾರ್ಯತಂತ್ರದ ಆಹ್ವಾನವೆಂದು ಪರಿಗಣಿಸಲಾಗಿದೆ ಎಂದು ಸಚಿವ ಕುಮಾರಸ್ವಾಮಿ ವಿವರಿಸಿದರು.