ಮೈಸೂರು: ಮೈಸೂರಿನ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಪಾದಚಾರಿಗಳು ಹಾಗೂ ವಾಹನಗಳು ಓಡಾಡುವ ಜಾಗದಲ್ಲಿ ಆನೆ ಹಾಗೂ ಕಮಲದ ಚಿತ್ರವನ್ನು ಬಿಡಿಸಿರುವುದಕ್ಕೆ ಮೈಸೂರು ರಕ್ಷಣಾ ವೇದಿಕೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರು ನಗರ ಸಂಭ್ರಮದಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ.
ಬಣ್ಣ ಬಣ್ಣದ ದೀಪ ಜನರನ್ನು ಸೆಳೆಯುತ್ತಿದೆ. ಆದರೆ ನಗರದ ಹೃದಯಭಾಗದಲ್ಲಿ, ಜಂಬೂಸವಾರಿ ಸಾಗುವ ಮಾರ್ಗವಾದ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಆನೆ ಹಾಗೂ ರಾಷ್ಟೀಯ ಹೂವು ಕಮಲದ ಚಿತ್ರಗಳನ್ನು ಬಿಡಿಸಲಾಗಿದೆ.

ಈ ಚಿತ್ರದ ಮೇಲೆಯೇ ಸಾವಿರಾರು ವಾಹನಗಳು ಮತ್ತು ಪಾದಚಾರಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಆದರೆ ಅನಿವಾರ್ಯವಾಗಿ ಸಾಗುತ್ತಾರೆ.

ಹಿಂದೂಗಳು ಹಾಗೂ ಬೌದ್ಧರು ದೇವರೆಂದು ಪೂಜಿಸುವ ಆನೆ ಹಾಗೂ ರಾಷ್ಟ್ರೀಯ ಹೂವು ಕಮಲದ ಚಿತ್ರಗಳನ್ನು ತುಳಿದುಕೊಂಡು ಓಡಾಡಬೇಕಾಗಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುವುದರ ಜೊತೆಗೆ ರಾಷ್ಟ್ರೀಯ ಹೂವಿಗೂ ಅಪಚಾರವಾಗುತ್ತಿದೆ ಎಂದು ಮೈಸೂರು ರಕ್ಷಣಾ ವೇದಿಕೆ ಕಾರ್ಯದರ್ಶಿ ರಾಕೇಶ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಮಲ ಬಿಜೆಪಿ ಪಕ್ಷದ ಚಿಹ್ನೆ ಸಹ ಆಗಿದೆ, ಹಗರಣಗಳಿಂದ ಹೆಸರು ಕೆಡಿಸಿಕೊಂಡಿರುವ ರಾಜ್ಯದ ಆಡಳಿತ ಪಕ್ಷ ವಿರೋಧ ಪಕ್ಷದ ಮೇಲೆ ಹಾಗೂ ಬಹುಸಂಖ್ಯಾತ ಹಿಂದೂಗಳ ಮೇಲೆ ಈ ರೀತಿ ಕೋಪ ತೋರಿಸಿಕೊಳ್ಳುತ್ತಿದೆಯಾ ಎಂಬ ಅನುಮಾನ ಜನ ಸಾಮಾನ್ಯರನ್ನು ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಜಿಲ್ಲಾಡಳಿತ ಕೂಡಲೇ ಈ ಅಪಚಾರವನ್ನು ತಡೆದು ರಸ್ತೆಗಳಲ್ಲಿ ಧಾರ್ಮಿಕ ಚಿತ್ರಗಳನ್ನು ಬರೆಸುವುದು ನಿಲ್ಲಿಸಬೇಕು ಎಂದು ಮೈಸೂರು ರಕ್ಷಣಾ ವೇದಿಕೆ ಪರವಾಗಿ ರಾಕೇಶ್ ಭಟ್ ಆಗ್ರಹಿಸಿದ್ದಾರೆ.