ಮೃತ ಮರಿಯ ದೇಹ ಹೊತ್ತು ಅಲೆಯುತ್ತಿರುವ ತಾಯಿ ಆನೆ

Spread the love

(ವರದಿ:ಸಿಬಿಎಸ್)

ಹಾಸನ: ಮರಿ ಸತ್ತು ಮೂರು ದಿನ ಕಳೆದರೂ ತಾಯಿ ಆನೆ ತಾನು ಹೋದಲೆಲ್ಲ ತನ್ನ ಕಂದನ ದೇಹವನ್ನು ಎಳೆದುಕೊಂಡು ಹೋಗುತ್ತಿರುವ ಮನಃ ಕಲಕುವ ದೃಶ್ಯ ಬೇಲೂರು ತಾಲ್ಲೂಕಿನಲ್ಲಿ ಕಂಡು ಬಂದಿದೆ.

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕ್ನಳ್ಳಿ ಎಸ್ಟೇಟ್ ಬಳಿ‌ ಹೀಗೆ ತಾಯಿ ಆನೆ ಸುತ್ತುವುದನ್ನು ಸ್ಥಳೀಯರು ಕಂಡು ಮಮ್ಮಲ ಮರುಗಿದ್ದಾರೆ.

ಶನಿವಾರ ಗರ್ಭಿಣಿ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿತ್ತು, ಆದರೆ ಹುಟ್ಟುವ ವೇಳೆ ಮರಿ ಮೃತಪಟ್ಟಿದೆ.

ತಾಯಿ ಆನೆ ತನ್ನ ಕಂದ ಮಿಸುಕಾಡದುದನ್ನು ಕಂಡು ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದೆ. ಆದರೆ, ಮೃತ ಮರಿ ಮೇಲೇಳಲೇ ಇಲ್ಲ.

ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.

ಜೋರು ಮಳೆ ಸುರಿಯುತ್ತಿರುವುದರ ಜೊತೆಗೆ ಸತ್ತ ಮರಿಯನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಜನರು ಮರಗುತ್ತಿದ್ದಾರೆ.

ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂಬ ಭ್ರಮೆಯಲ್ಲಿರುವ ಆನೆ, ಯಾರನ್ನೂ ಹತ್ತಿರ ಹೋಗಲು ಬಿಡುತ್ತಿಲ್ಲ.ಅಕ್ಕ,ಪಕ್ಕ ಬೇರೆ ಆನೆಗಳಿದ್ದರೆ ಸಾಂತ್ವನ ಹೇಳುತ್ತಿದ್ದವೋ ಏನೊ,ಈಗ ತಾಯಿ ಆನೆ ಒಂಟಿಯಾಗಿದೆ.ಅದರ ದುಃಖ ಕೇಳುವವರು ಯಾರೂ ಇಲ್ಲದಂತಾಗಿದೆ.

ಭಾನುವಾರ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿ ಆನೆ ಮೃತಪಟ್ಟಿತ್ತು. ಈ ಘಟನೆ ಮರೆಯುವ ಮುನ್ನವೇ ಮತ್ತೊಂದು ಮರಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ನೋವುಂಟು ಮಾಡಿದೆ.