ನವದೆಹಲಿ: ಸರಕು ಸಾಗಣೆ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಪ್ರಮಾಣದಲ್ಲಿ ಅಳವಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ
ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನವದೆಹಲಿಯಲ್ಲಿ ಗುರುವಾರ ಎಲೆಕ್ಟ್ರಿಕ್ ಟ್ರಕ್ ಉದ್ಯಮದ ಮುಖ್ಯಸ್ಥರ ಜತೆ ಸಂವಾದ ನಡೆಸಿದ ಕುಮಾರಸ್ವಾಮಿ, ಸರಕು ಸಾಗಣೆಯ ಕ್ಷೇತ್ರದಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಿ ಸಾಗಾಣಿಕೆಯಲ್ಲಿ ಕ್ಷಮತೆ ಸಾಧಿಸುವ ಉದ್ದೇಶದಿಂದ ಕೇಂದ್ರ ಎಲ್ಲಾ ರೀತಿಯ ಉತ್ತೇಜನ ನೀಡುತ್ತಿದೆ,ಇದಕ್ಕಾಗಿ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 27,000 ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈಗಾಗಲೇ 10,500ಕ್ಕೂ ಹೆಚ್ಚು ಬಸ್ ಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಉತ್ತೇಜನಗೊಂಡಿರುವ ಕೇಂದ್ರ ಸರ್ಕಾರವು ಇದೀಗ ಈಗ ತನ್ನ ಗಮನವನ್ನು ಸರಕು ಸಾಗಣೆ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಟ್ರಕ್ ಗಳನ್ನು ರಸ್ತೆಗಳಿಗೆ ಇಳಿಸಲು ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಟ್ರಕ್ ಉದ್ಯಮವು ಭಾರತದ ಪೂರೈಕೆ ಸರಪಳಿ ಮತ್ತು ಸಾಗಾಣಿಕೆಯ ಬೆನ್ನೆಲುಬಾಗಿದೆ, ಆದರೆ ಇದು ಇಂಧನ ಬಳಕೆ ಮತ್ತು ಇಂಗಾಲ ಹೊರಸೂಸುವಿಕೆಯ ಗಮನಾರ್ಹ ಪಾಲನ್ನು ಈ ಕ್ಷೇತ್ರವೇ ಹೊಂದಿದೆ ಎಂಬುದು ಕಳವಳಕಾರಿ ಸಂಗತಿ” ಎಂದು ಕುಮಾರಸ್ವಾಮಿ ಹೇಳಿದರು.
2070ರ ವೇಳೆಗೆ ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಬದ್ಧತೆಯನ್ನು ಈ ಉಪಕ್ರಮ ಎತ್ತಿ ತೋರಿಸುತ್ತದೆ. ಹಸಿರು ದಿಕ್ಕಿನತ್ತ ಟ್ರಕ್ ಉದ್ಯಮವನ್ನು ಮುನ್ನಡೆಸುವ ನಿಟ್ಟಿನಲ್ಲಿ ಇದು ಪರಿಣಾಮಕಾರಿ ಕ್ರಮ ಎಂದು ಹೇಳಿದರು.
ಇಂಟೆಂಟ್ ಸ್ಥಾಪಕಿ ಮಹುವಾ ಆಚಾರ್ಯ,ಜಮ್ಶ್ಯದ್ ಗೋದ್ರೇಜ್, ಮನೋಜ್ ಕೊಹ್ಲಿ, ಅನಿತಾ ಜಾರ್ಜ್, ಸಂಜಯ್ ಕಪೂರ್, ರವಿ ಪಂಡಿತ್, ಪ್ರಶಾಂತ್ ಶ್ರೀವಾಸ್ತವ ವಿನೀತ್ ಅಗರ್ವಾಲ್, ಚಾಂದನಿ ಧೀರ್ ಮತ್ತಿತರರು ಹಾಜರಿದ್ದರು.